ಜಿಲ್ಲೆ

ಉಡುಪಿಯ ಚರ್ಚುಗಳಲ್ಲಿ 6ರಿಂದ ಸಾಮೂಹಿಕ ಪೂಜೆ

ಉಡುಪಿ: ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಜುಲೈ 6ರಿಂದ ಸಾಮೂಹಿಕ ಪೂಜೆ, ಆರಾಧನೆಗಳಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 2ರವರೆಗೆ ಭಾನುವಾರ ಲಾಕ್‌ಡೌನ್ ಇರುವುದರಿಂದ ಈ ದಿನಗಳಲ್ಲಿ ಪೂಜೆ, ಆರಾಧನೆ ಸಾಧ್ಯವಿಲ್ಲ. ವಾರದ ಇತರ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಜಿಲ್ಲಾಡಳಿತ ನೀಡಿದ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪೂಜೆ ನಡೆಸಬಹುದು ಎಂದು ಉಡುಪಿ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಲೋಬೊ ತಿಳಿಸಿದ್ದಾರೆ.

ಸರ್ಕಾರ ಜೂ.8ರಿಂದ ಚರ್ಚುಗಳನ್ನು ತೆರೆಯಲು ಅವಕಾಶ ನೀಡಿದ್ದರೂ ಭಕ್ತರ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಜೂ.30ರವರೆಗೆ ಸಾಮೂಹಿಕ ಪೂಜೆ, ಪ್ರಾರ್ಥನೆ ನಡೆಸದಿರಲು ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ನಿರ್ಧರಿಸಿತ್ತು. ಪ್ರಸ್ತುತ ಭಕ್ತರು ಪ್ರಾರ್ಥನೆಗಳಲ್ಲಿ ಭಾಗವಹಿಸಲು ಉತ್ಕಟ ಇಚ್ಛೆ ಹೊಂದಿದ್ದು, ಮುಂಜಾಗ್ರತಾ ಕ್ರಮಗಳೊಂದಿಗೆ ಚರ್ಚ್ ತೆರೆಯಲಾಗುತ್ತದೆ. ಕಂಟೇನ್ಮೆಂಟ್ ವಲಯದ ಚರ್ಚ್‌ಗಳು ಪರಿಸ್ಥಿತಿ ತಿಳಿಯಾಗುವವರೆಗೆ ಕಾದು ಭಕ್ತರೊಂದಿಗೆ ಚರ್ಚಿಸಿ ತೀರ್ಮಾನಿಸಬಹುದು ಎಂದು ತಿಳಿಸಿದ್ದಾರೆ.

ಉಡುಪಿ ಕೆಥೊಲಿಕ್ ಧರ್ಮಪ್ರಾಂತ, ಸಿಎಸ್‌ಐ, ಯುಬಿಎಂ, ಫುಲ್ ಗೊಸ್ಪೆಲ್ ಪಾಸ್ಟರ್ಸ್‌ ಅಸೋಸಿಯೇಶನ್ ಹಾಗೂ ಇತರ ಕ್ರೈಸ್ತ ಸಭೆಗಳ ಧಾರ್ಮಿಕ ನಾಯಕರು ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್‌ನ ಸಭೆಯಲ್ಲಿ ಪಾಲ್ಗೊಂಡಿದ್ದರು.