ಜಿಲ್ಲೆ

ಹೊಸದುರ್ಗದಲ್ಲಿ ಸಾಮೂಹಿಕ ಪ್ರಾರ್ಥನೆ

Davangere - Desk - Mahesh Babu E

ಹೊಸದುರ್ಗ: ಪಟ್ಟಣದಲ್ಲಿ ಗುರುವಾರ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಅಲ್ಲಾನ ಪ್ರಾರ್ಥನೆ ಮಾಡಿ ಶುಭಾಷಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಪಟ್ಟಣದ ಜಾಮಿಯಾ ಮಸೀದಿಯಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಮಸೀದಿಯ ಮುಖ್ಯಸ್ಥ ಹಜರತ್ ಮೌಲಾನ ರಾಷಿದ್ ಎಕ್ಬಾಲ್ ಅವರು ಪ್ರವಾದಿ ಮಹಮದ್ (ಸ) ಅವರ ತತ್ವ ಸಂದೇಶಗಳು, ಇಸ್ಮಾಂ ಧರ್ಮದ ಮಹತ್ವ ಮತ್ತು ಆಚರಣೆ ಕುರಿತು ಜನತೆಗೆ ಸಂದೇಶ ನೀಡಿದರು.

ಪಟ್ಟಣದ ಚಾಮರಾಜಪೇಟೆ ಜಾಮಿಯ ಮಸೀದಿಯಿಂದ ಟಿ.ಬಿ. ವೃತ್ತದ ಶಾದಿ ಮಹಲ್ ವರೆಗೆ ಮೆರವಣಿಗೆ ನಡೆಸಲಾಯಿತು.

ಮುಖ್ಯರಸ್ತೆಯ ಮೂಲಕ ಸಾಗಿ ಬಂದ ಮೆರವಣಿಗೆ ಹಿರಿಯೂರು ವೃತ್ತ, ಹಳೇ ಬಸ್ ನಿಲ್ದಾಣ, ಗಾಂಧಿ ವೃತ್ತದ ಮೂಲಕ ಶಾದಿ ಮಹಲ್ ಆವರಣಕ್ಕೆ ತಲುಪಿತು. ಮೆರವಣಿಗೆ ಸಾಗಿ ಬಂದ ರಸ್ತೆಗಳನ್ನು ಹಸಿರು ಹಾಗೂ ಬಿಳಿ ಬಣ್ಣದ ಬಾವುಟಗಳಿಂದ ಸಿಂಗರಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಬರೆದ ಕುರಾನ್ ಸಂದೇಶಗಳ ಬಿತ್ತಿ ಫಲಕಗಳನ್ನು ಕೈಯಲ್ಲಿ ಹಿಡಿದಿದ್ದ ಚಿಣ್ಣರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮೆಕ್ಕಾ, ಮದೀನದ ಅಕೃತಿಗಳನ್ನು ಒಳಗೊಂಡ ಹತ್ತಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಗಮನಸೆಳೆದವು. ಶಾದಿ ಮಹಲ್ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಮೆರವಣಿಗೆ ಮುಕ್ತಾಯವಾಯಿತು.

ಮುಸ್ಲಿಂ ಸಮಾಜದ ಧರ್ಮಗುರುಗಳು, ಮುಖಂಡರು ಕುರಾನ್ ಪಠಿಸುತ್ತಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಹಜರತ್ ದಾದಾಪೀರ್, ಹಜರತ್ ಮಹಮದ್ ಜಹಿರುದ್ದಿನ್, ಹಜರತ್ ಅತಾವುಲ್ಲ ಖಾದ್ರಿ, ಹಜರತ್ ರಹಿಲ್ ರಜಾ, ಮುಖಂಡರಾದ ಫಕ್ರುದ್ದಿನ್, ಜಾಫರ್ ಸಾಧಿಕ್, ಫಯಾಜ್, ಕರೀಂವುಲ್ಲಾ, ಅಲ್ತಾಪ್ ಪಾಷಾ, ಮುಜಾಮಿಲ್, ಅನ್ವರ್, ಅಕ್ರಂ ಇತರರಿದ್ದರು.