ಹೂವಿನಹಡಗಲಿ: ಡಿನಲ್ಲಿ ಧಾರ್ಮಿಕ-ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿರುವ ಮಠಗಳಲ್ಲಿ ತಾಲೂಕಿನ ಪುರದ ಮಠವು ಕೂಡ ಒಂದಾಗಿದ್ದು, ಶ್ರೀಮಠದ ಎಲ್ಲ ಸಾಮಾಜಿಕ ಕಾರ್ಯಗಳಿಗೂ ನಾನು ಜತೆಯಾಗಿರುತ್ತೇನೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ತಾಲೂಕಿನ ಪುರ ಗ್ರಾಮದ ಕಟ್ಟೆಮನೆಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಸಿದ್ದವೀರ ಶಿವಾಚಾರ್ಯರ 48ನೇ ಸ್ಮರಣೋತ್ಸವ, ಚಂದ್ರಶೇಖರ ಶಿವಾಚಾರ್ಯರ 10ನೇ ಪುಣ್ಯಸ್ಮರಣೆ ಹಾಗೂ ಸಾಮೂಹಿಕ ವಿವಾಹ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಮಠದಿಂದ ಪ್ರತಿವರ್ಷ ನಡೆಯುವ ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿವೆ. ನವ ಜೀವನ ಆರಂಭಿಸುತ್ತಿರುವ ದಂಪತಿಗಳು ಆದರ್ಶ ಜೀವನವನ್ನು ನಡೆಸಿ ಎಂದರು.
ನಿವೃತ್ತ ಪ್ರಾಧ್ಯಾಪಕ ಆರ್.ಎಲ್.ಪೊಲೀಸ್ ಪಾಟೀಲ್ ಮಾತನಾಡಿ, ನಾಡಿನಲ್ಲಿ ಮಠಗಳು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕವಾಗಿ ಅನೇಕ ಕೊಡುಗೆಗಳನ್ನು ನೀಡಿವೆ. ಮಠಮಾನ್ಯಗಳು ಅಕ್ಷರದಾಸೋಹ ಮಾಡದಿದ್ದರೆ ಅನೇಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದರು ಎಂದರು.
ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಬಿ.ಕುಲಕರ್ಣಿ ಹಾಗೂ ಇತರರು ಮಾತನಾಡಿದರು. ಎನ್.ಪಂಚಾಕ್ಷರಿಗೌಡ ಅವರಿಗೆ ಮರಣೋತ್ತರವಾಗಿ ಶ್ರೀ ಪಟ್ಟದ ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿಯನ್ನು ಅವರ ಪುತ್ರ ನಿವೃತ್ತ ಪ್ರಾಚಾರ್ಯ ಎನ್.ವರಕುಮಾರಗೌಡ ಕುಟುಂಬಕ್ಕೆ ಪ್ರದಾನ ಮಾಡಲಾಯಿತು.
ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನ ಮಠದ ವರಸದ್ಯೋಜಾತ ಸ್ವಾಮೀಜಿ, ಅಂಗೂರಿನ ಶಿವಯೋಗೀಶ್ವರ ಸ್ವಾಮೀಜಿ ಸೇರಿದಂತೆ ಪ್ರಮುಖರಾದ ಉಮೇಶ ಮುಂಡವಾಡ, ದೀಪದ ಕೃಷ್ಣಪ್ಪ, ಎಂ. ಸತ್ಯನಾರಾಯಣ, ಪಿ.ಕೆ.ಎಂ.ರೇವಣಸಿದ್ದಸ್ವಾಮಿ, ಅಂಗಡಿ ಗೌರೀಶ, ಎನ್.ಸುಧಾಕರ, ವೈ. ಶಿವರಾಯನಗೌಡ, ಗಡ್ಡಿ ಗುಡ್ಡಪ್ಪ, ಬಿ. ಪರಮೇಶ್ವರಗೌಡ ಇತರರು ಇದ್ದರು.