ಗಜೇಂದ್ರಗಡ ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಸಾಮರಸ್ಯ ಹೆಚ್ಚುವ ಜತೆಗೆ, ಆರ್ಥಿಕ ದುರ್ಬಲರಿಗೆ ಸಹಕಾರಿಯಾಗಲಿದೆ ಎಂದು ಮೈಸೂರ ಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.
ಸಮೀಪದ ರಾಜೂರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಪುರಾಣದ ರಜತ ಮಹೋತ್ಸವ, ದೇವಿಯ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶರನ್ನವರಾತ್ರಿ ದಸರಾ ಮಹೋತ್ಸವ ಹಾಗೂ ದೇವಿ ಪುರಾಣದ ಮಹಾಮಂಗಲದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶಿರ್ವಚನ ನೀಡಿದರು.
ಮನೆಯ ಮುಂದೆ ಅದ್ದೂರಿಯಾಗಿ ಮದುವೆ ಮಾಡಿಕೊಂಡು ಸಾಲಗಾರರಾಗುವ ಬದಲು ಇಂತಹ ದೇವಿ ಸನ್ನಿಧಿಯಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಜತೆಗೆ ಹಲವು ಪೂಜ್ಯರ, ಸಾವಿರಾರು ಜನರ ಹಾರೈಕೆ ಲಭಿಸುತ್ತದೆ. ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿಗಳು ಮುಂದೆ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಅವರನ್ನು ಸಮಾಜದ ಹಾಗೂ ದೇಶದ ಉತ್ತಮ ಪ್ರಜೆಗಳನ್ನಾಗಿಸುವ ಸಂಕಲ್ಪ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ 8 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಸೀತೆಮನಿ ಪೂರ್ಣಾನಂದ ಪುಣ್ಯಾಶ್ರಮದ ವಸಿಷ್ಠ ಸ್ವಾಮೀಜಿ, ನರಸಿಪೂರದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಗ್ರಾಮದ ನೂರಾರು ಮಹಿಳೆಯರು ಕನಕದಾರತಿ ಹಿಡಿದು ದೇವಿಗೆ ಸಾಮೂಹಿಕವಾಗಿ ಆರತಿ ಬೆಳಗಿದರು.
ಗ್ರಾಮದ ಜಂಗಮರಾದ ಕಳಕಯ್ಯ ಸಾಲಿಮಠ, ವೀರೇಶ ಸಾಲಿಮಠ, ವೀರಯ್ಯ ಸಾಲಿಮಠ, ಗ್ರಾಮಸ್ಥರಾದ ಪರಸಪ್ಪ ಕಟ್ಟಿಮನಿ, ಫಕೀರಪ್ಪ ಕಟ್ಟಿಮನಿ, ಕಿರಣ ಹಾವರಗಿ, ಈರಣ್ಣ ಬಾರಕೇರ, ಜಗದೀಶ ಕಟ್ಟಿಮನಿ, ಹನಮಂತ ಕಟ್ಟಿಮನಿ ಇದ್ದರು.