ಅಳವಂಡಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮುಖಂಡರು ದೀಪ ಬೆಳಗಿಸಿ ಚಾಲನೆ ನೀಡಿದರು, ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಶ್ರೀ ಚಿನ್ಮಯ ಸ್ವಾಮೀಜಿ, ಶ್ರೀ ಚಂದ್ರಶೇಖರ ಶಿವಾಚಾರ್ಯರು, ಶ್ರೀ ಶಿವಯೋಗಿ ಸಣ್ಣ ಹಾಲ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಸಾಮೂಹಿಕ ಮದುವೆ ಬಡವರಿಗೆ ಸೌಭಾಗ್ಯ ಇದ್ದಂತೆ

ಅಳವಂಡಿ: ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವುದರಿಂದ ಆರ್ಥಿಕ ಉಳಿತಾಯ ಆಗಲಿದೆ ಎಂದು ಹಿರೇಹಡಗಲಿಯ ಶ್ರೀ ಶಿವಯೋಗಿ ಸಣ್ಣ ಹಾಲಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಶ್ರೀ ಶಾಂತಮ್ಮದೇವಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಬದಲಾವಣೆಯಿಂದ ಮದುವೆಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಆದರೆ ಸಂಘ ಸಂಸ್ಥೆಗಳು, ಮಠ ಮಾನ್ಯಗಳು ಸಾಮೂಹಿಕ ಮದುವೆ ಆಯೋಜಿಸುತ್ತಿರುವುದು ಬಡ ಜನರಿಗೆ ಸಹಕಾರಿಯಾಗಿದೆ. ನವ ದಂಪತಿಗಳು ಪ್ರೀತಿ, ಗೌರವ, ನಂಬಿಕೆಯೊಂದಿಗೆ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಮಾತನಾಡಿ, ಜೀವನದಲ್ಲಿ ಧಾರ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಸಾಮೂಹಿಕ ಮದುವೆಗಳು ಬಡವರ ಪಾಲಿಗೆ ಸೌಭಾಗ್ಯ ಇದ್ದಂತೆ ಎಂದರು.

ರಾಜ್ಯ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ದಂಪತಿಗಳು ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಸರಾಗವಾಗಿ ಸಂಸಾರವೆಂಬ ಬಂಡಿ ಸಾಗಿಸಬೇಕು. ಗುರು-ಹಿರಿಯರು, ಅತ್ತೆ-ಮಾವ, ಪಾಲಕರನ್ನು ಗೌರವದಿಂದ ಕಾಣಬೇಕು ಎಂದರು.

ಅಳವಂಡಿ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಕೂಲಹಳ್ಳಿಯ ಶ್ರೀ ಪಟ್ಟದ ಚಿನ್ಮಯ ಶ್ರೀಗಳು, ಗುಮ್ಮಗೋಳದ ಚಂದ್ರಶೇಖರ ಶಿವಾಚಾರ್ಯರು, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ, ಶ್ರೀ ಗುರುಮೂರ್ತಿ ಸ್ವಾಮೀಜಿ, ಈಶಪ್ಪ ಮಾದಿನೂರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶಗೌಡ, ಪ್ರಮುಖರಾದ ಭರಮಪ್ಪ ನಗರ, ವಿನೋದಾದೇವಿ ಇನಾಮದಾರ, ತೋಟಪ್ಪ, ನೀಲಪ್ಪ, ವೀರೇಶ ಸಜ್ಜನ, ಬಸವರಡ್ಡಿ, ಊರಿನ ಮುಖಂಡರು, ಗ್ರಾಪಂ, ಸಂಘ-ಸಂಸ್ಥೆಗಳ ಸದಸ್ಯರಿದ್ದರು.