ಜಿಲ್ಲೆ

ಸಾಮೂಹಿಕ ಸ್ವಚ್ಛತೆಗೆ ಆದ್ಯತೆ ನೀಡಿ

Belagavi

ಸವದತ್ತಿ: ಲಾಕ್‌ಡೌನ್‌ನಿಂದಾಗಿ ಸಮಸ್ಯೆ ಅನುಭವಿಸುತ್ತಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಸದುಪಯೋಗ ಪಡೆಯಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದ್ದಾರೆ.

ತಾಲೂಕಿನ ಗೊರಾಬಾಳ ಗ್ರಾಮದಲ್ಲಿ ಮಂಗಳವಾರ ಗ್ರಾಮ ವಿಕಾಸ ಯೋಜನೆ, ಜಿಪಂ ಮತ್ತು ಸಂಸದರ ಅನುದಾನದಡಿ ನಿರ್ಮಿಸಲಾದ ಸಭಾಭವನ ಉದ್ಘಾಟಿಸಿ ಮಾತನಾಡಿ, ತಾಲೂಕಿನ 4,900 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನ ಚಂದ್ರಶೇಖರ ಮಾಮನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಗುವುದು.

ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಸಂಬಳ ಒದಗಿಸುವ ಕೆಲಸ ನಡೆಯುತ್ತಿದೆ. ಪ್ರತಿಯೊಬ್ಬರು ಅಂತರ ಕಾಯ್ದುಕೊಂಡು ಮಹಾಮಾರಿ ಕರೊನಾ ಹಿಮ್ಮೆಟ್ಟಿಸುವಲ್ಲಿ ಸಹಕರಿಸಬೇಕು. ವೈಯಕ್ತಿಕ ಹಾಗೂ ಗ್ರಾಮದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾದ ಸಮುದಾಯಭವನ ವಿವಿಧ ಕಾರ್ಯಕ್ರಮ ಆಯೋಜನೆಗೆ ನೆರವಾಗಲಿದೆ. ದೇವಸ್ಥಾನದ ಬಲಗಡೆ ಇರುವ ಖಾಲಿ ಜಾಗದಲ್ಲಿ ಮತ್ತೊಂದು ಸಮುದಾಯ ಭವನ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಾಮನಿ ಭರವಸೆ ನೀಡಿದರು.

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಾಕ್‌ಡೌನ್‌ನಿಂದ ದೊಡ್ಡ ಪ್ರಮಾಣದಲ್ಲಿ ನಷ್ಟವಾದರೂ ಸಹ ಎಲ್ಲ ವರ್ಗದವರಿಗೂ ಸಹಾಯಧನ ನೀಡಿ, ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯ ಸ್ಮರಣೀಯ ಎಂದರು. ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ತಾಪಂ ಇಒ ಯಶವಂತಕುಮಾರ, ಎಪಿಎಂಸಿ ಅಧ್ಯಕ್ಷ ಜಗದೀಶ ಹನಶಿ, ಜಿಪಂ ಸದಸ್ಯ ಎಂ.ಎಸ್. ಹಿರೇಕುಂಬಿ, ಸುವರ್ಣಾ ಮಾದರ, ಎಸ್.ಕೆ.ಪಾಟೀಲ, ಬಸವರಾಜ ಇತರರು ಇದ್ದರು.