ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ವಚ್ಛತಾ ಕಾರ್ಯ ಹಿಂದೆಂದೂ ನಡೆದಿರಲಿಲ್ಲ. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಡಾ. ಶ್ರೀ ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ 12 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಲ್ಲಿ ಸ್ವಯಂಪ್ರೇರಣೆಯಿಂದ ಸ್ವಚ್ಛತೆ ಕಾರ್ಯಕೈಗೊಂಡರು.
ರೈಲು, ಸಾರಿಗೆ ಬಸ್, ಮ್ಯಾಕ್ಸಿ ಕ್ಯಾಬ್, ಇನ್ನಿತರ ವಾಹನಗಳಲ್ಲಿ ತಂಡ ತಂಡವಾಗಿ ನಗರಕ್ಕೆ ಬೆಳಗಿನ ಜಾವ ಬಂದಿಳಿದ ಅವರು ತಮಗೆ ನಿಯೋಜಿಸಿದ ಸ್ಥಳಗಳಿಗೆ ತೆರಳಿ ಸ್ವಚ್ಛತೆ ಕಾರ್ಯಕ್ಕೆ ಇಳಿದರು. ಬೆಳಗಿನ ಜಾವ ಸ್ಥಳೀಯ ನಿವಾಸಿಗಳು ವಾಕಿಂಗ್ ಮುಗಿಸುವ ಮೊದಲೇ ಇವರು ನಗರದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತೆಗೆ ಇಳಿದಿದ್ದರು. ಪೊರಕೆ ಹಿಡಿದು ರಸ್ತೆಯಲ್ಲಿ ಕಸಗುಡಿಸಿದರು. ಸಲಕಿಯಿಂದ ಕಸಗಳನ್ನು ಎತ್ತಿ ಚೀಲದಲ್ಲಿ ತುಂಬಿ ಆಟೋ ಟಿಪ್ಪರ್, ಟ್ರ್ಯಾಕ್ಟರ್ಗಳಿಗೆ ಹೇರಿದರು. ತಮ್ಮಷ್ಟಕ್ಕೆ ತಾವು 3 ತಾಸು ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದರು.
15-20 ದಿನ ಮುಂಚಿತವಾಗಿಯೇ ಪ್ರತಿಷ್ಠಾನದಿಂದ ಮಹಾ ಸ್ವಚ್ಛತಾ ಅಭಿಯಾನ ಕೈಗೊಳ್ಳುವ ಬಗ್ಗೆ ಪ್ರಚಾರ ಕೈಗೊಂಡಿದ್ದರೂ ಇದಕ್ಕೆ ಸ್ಥಳೀಯರಿಂದ ಹೆಚ್ಚಿನ ಸಹಕಾರ ಸಿಗಲಿಲ್ಲ. ಸಕ್ರಿಯವಾಗಿ ತೊಡಗಿಸಿಕೊಂಡ ನಗರ ವಾಸಿಗಳ ಸಂಖ್ಯೆ ಬಹಳ ವಿರಳವಾಗಿತ್ತು. ಭಾನುವಾರ ರಜೆಯನ್ನು ಮನೆ ಮಂದಿಯೊಂದಿಗೆ ಕಳೆದಂತೆ ಇತ್ತು. ಪಾಲಿಕೆಯ ಪೌರ ಕಾರ್ವಿುಕರು ಅಭಿಯಾನಕ್ಕೆ ಸಾಥ್ ನೀಡಿದ್ದರು.
2600 ಟನ್ ಕಸ ಸಂಗ್ರಹ
ಅಭಿಯಾನದ ಪರಿಣಾಮವಾಗಿ ಕೊಪ್ಪಿಕರ ರಸ್ತೆ, ಜನತಾಬಜಾರ್, ಗಣೇಶಪೇಟ, ದುರ್ಗದಬೈಲ್, ಕುಸುಗಲ್ ರಸ್ತೆ, ಚನ್ನಮ್ಮ ವೃತ್ತ, ಇನ್ನಿತರ ಪ್ರದೇಶಗಳ ರಸ್ತೆಗಳು, ಬಡಾವಣೆಗಳು ಕಸ ಮುಕ್ತವಾಗಿ ಕ್ಲೀನ್ ಕ್ಲೀನ್ ಆದವು.
11 ಪೊಲೀಸ್ ಠಾಣೆ, 3 ಬಸ್ ನಿಲ್ದಾಣ, 12 ಸರ್ಕಾರಿ ಕಚೇರಿ ಹಾಗೂ 16 ಮಾರುಕಟ್ಟೆ ಪ್ರದೇಶಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. ಸುಮಾರು 2600ರಿಂದ 2800 ಟನ್ ಕಸ ಸಂಗ್ರಹಿಸಲಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಮಾಜಿ ಸಚಿವ ಪ್ರಮೋದ ಮದ್ವರಾಜ್, ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್, ಪಾಲಿಕೆ ಸದಸ್ಯರು ಹುಬ್ಬಳ್ಳಿ ಜನತಾ ಬಜಾರ್ ರಸ್ತೆಯಲ್ಲಿ ಸ್ವಚ್ಛತೆ ಕಾರ್ಯಕ್ಕೆ ಕೈ ಜೋಡಿಸಿದರು.