ಹುಬ್ಬಳ್ಳಿ : ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್ನ ಗ್ರಾಮ ವಿಕಾಸ ಸಂಸ್ಥೆಯ ಕರ್ನಾಟಕ ಅಗ್ನಿಹೋತ್ರ ಸ್ಪೆಕ್ಟ್ಯಾಕ್ಯುಲರ ವತಿಯಿಂದ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮವನ್ನು ಏಪ್ರಿಲ್ 13ರಂದು ಬೆಳಗ್ಗೆ 10.30 ರಿಂದ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಮನಸೂರ ಬಳಿಯ ಅಗ್ನಿಹೋತ್ರ ಸಂಶೋಧನೆ ಕೇಂದ್ರ ಇಂಡಿಗೋ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಜಗದೀಶ ನಾಯಿಕ, ಅಂದು 11,111ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅಗ್ನಿಹೋತ್ರ ನಡೆಯಲಿದೆ ಎಂದರು.
ಬೆಳಗ್ಗೆ 10.30ಕ್ಕೆ ನೋಂದಣಿ, 11ಕ್ಕೆ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ಜಯಂತ್ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ, 1.45ಕ್ಕೆ ನಡೆಯುವ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ದೇವರ ಹುಬ್ಬಳ್ಳಿಯ ಶ್ರೀ ಸಿದ್ಧಶಿವಯೋಗಿ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂದಗೋಳದ ಶ್ರೀ ಬಸವಣ್ಣಜ್ಜನವರ ಹಾಗೂ ಹುಕ್ಕೇರಿ ನಿಡಸೋಸಿಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ವಹಿಸುವರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆ ವಹಿಸುವರು. ಸಭಾಧ್ಯಕ್ಷ ಯು.ಟಿ. ಖಾದರ, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಇನ್ನಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಂಜೆ 6.30 ರಿಂದ 6.44ರವರೆಗೆ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮ ಹಾಗೂ 6.45ಕ್ಕೆ ಸಾಮೂಹಿಕ ಧ್ಯಾನ ನಡೆಯಲಿದೆ ಎಂದು ವಿವರಿಸಿದರು.
ಈಗಾಗಲೇ 30 ಜಿಲ್ಲೆಗಳ 20 ಸಾವಿರ ಜನರಿಗೆ ಅಗ್ನಿಹೋತ್ರ ಬಗ್ಗೆ ಅರಿವು ಮೂಡಿಸಲಾಗಿದೆ. 11,111 ಜನರಿಗೆ ಅಗ್ನಿಹೋತ್ರದ ಕಿಟ್ ವಿತರಿಸಲಾಗಿದೆ ಎಂದರು.
ಸಂಸ್ಥಾಪಕ ರೋಹನ ಶಿರಿ, ವ್ಯವಸ್ಥಾಪಕ ಧರ್ಮದರ್ಶಿ ಶಮ್ಮಿ ಶಿರಿ, ಕಾರ್ಯದರ್ಶಿ ಸಚಿನ ಆಲತಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.