ಮಸ್ಕಿ ಅಂಚೆ ಕಚೇರಿ ಆವರಣದಲ್ಲಿ ಮಳೆನೀರು ನಿಂತಿರುವುದು. 
ಜಿಲ್ಲೆ

ಮಸ್ಕಿಯಲ್ಲಿ ತಂಪೆರೆದ ಮಳೆರಾಯ

ಶ್ರೀನಾಥ

ಮಸ್ಕಿ: ಕಳೆದ ಮೂರು ತಿಂಗಳಿಂದ ಕೆಂಡದಂತೆ ಕಾದಿದ್ದ ಭೂಮಿಗೆ ಗುರುವಾರ ಬೆಳ್ಳಂಬೆಳಗ್ಗೆ ನಗರದಲ್ಲಿ ಸುರಿದ ಮಳೆ ತಂಪೆರೆಯಿತು.

ಬೆಳಗ್ಗೆ ಆರಂಭವಾದ ತುಂತುರು ಮಳೆ ಒಂದು ತಾಸಿನ ನಂತರ ಧಾರಕಾರವಾಗಿ ಸುರಿಯಿತು. ರಸ್ತೆಯಲ್ಲಿನ ತ್ಯಾಜ್ಯ ಮಳೆನೀರಿನ ಜತೆ ಹರಿದು ಚರಂಡಿಗಳಿಗೆ ಸೇರಿ ಬ್ಲಾಕ್ ಆಗಿದ್ದವು. ಮಲಿನ ನೀರು ರಸ್ತೆಗೆ ನುಗ್ಗಿ ಮುಖ್ಯಬೀದಿಯಲ್ಲಿ ಕಸ ಹರಡಿತ್ತು.

ಸರ್ವೀಸ್ ರಸ್ತೆ ವಿಸ್ತರಣೆಯಿಂದಾಗಿ ರಸ್ತೆ ಎತ್ತರವಾಗಿದ್ದು, ಅಂಗಡಿ-ಮುಂಗಟ್ಟುಗಳಿಗೆ, ಅಂಚೆ ಕಚೇರಿ ಆವರಣಕ್ಕೆ ನೀರು ನುಗ್ಗಿದೆ. ಮಳೆ ನಿಂತ ಬಳಿಕ ಸೇವೆ ಪಡೆಯಲು ಅಂಚೆ ಕಚೇರಿಗೆ ಬಂದ ಗ್ರಾಹಕರು, ವೃದ್ಧರು ಕೊಂಚ ಕಾಲ ಪರದಾಡಿದರು.

ನಂತರ ಮಳೆ ನೀರನ್ನು ಚರಂಡಿಗೆ ಸಾಗಿಸಲಾಯಿತು. ಇತ್ತ ಕನಕ ವೃತ್ತ, ಹಳೇ ಬಸ್‌ನಿಲ್ದಾಣ, ಪುರಸಭೆ ಹತ್ತಿರ ರಸ್ತೆ ಮೇಲೆ ಕಸ ಹರಡಿರುವ ದೃಶ್ಯ ಸಾಮಾನ್ಯವಾಗಿತ್ತು. ಸಂತೆ ಬಜಾರ್, ಗಾಂಧಿನಗರ, ಜೋಲ್ಗೇರ ಓಣಿಯಲ್ಲಿ ಮಳೆ ನೀರು ನಿಂತು ಓಡಾಡಲು ಬಾರದಂತಾಗಿದೆ.