ಮಸ್ಕಿ: ಕಾಂಗ್ರೆಸ್ ಪಕ್ಷದ ವಸತಿ ಯೋಜನೆ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠಗೆ ಇಲ್ಲ. ಮಸ್ಕಿ ಪಟ್ಟಣದ ಪರಾಪುರ ರಸ್ತೆಯಲ್ಲಿರುವ ಭೂಮಿಯನ್ನು ಆಶ್ರಯ ಯೋಜನೆಗಾಗಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಖರೀದಿಸಲಾಗಿತ್ತು. ಇದುವರೆಗೆ ಯಾಕೆ ಮನೆಗಳನ್ನು ಹಂಚಿಕೆ ಮಾಡಿಲ್ಲ. ಅದರ ಬಗ್ಗೆ ಹೋರಾಟ ಮಾಡಲಿ ಎಂದು ಕಾಂಗ್ರೆಸ್ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಸಿದ್ದನಗೌಡ ತುರ್ವಿಹಾಳ ಪ್ರಶ್ನಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಾಪುರ ರಸ್ತೆಯ ಸರ್ವೇ ನಂ 70 ಹಿಸ್ಸಾ-1 ರಲ್ಲಿ 2 ಎಕರೆ ಮತ್ತು ಸರ್ವೇ ನಂ 70 ಹಿಸ್ಸಾ-24 ಎಕರೆ ಒಟ್ಟು ಆರು ಎಕರೆ ಭೂಮಿಯನ್ನು 81 ಲಕ್ಷ ರೂ.ವೆಚ್ಚದಲ್ಲಿ ಖರೀದಿಸಲಾಗಿದೆ. ಆದರೆ ಇದುವರೆಗೆ ಮನೆಗಳನ್ನು ಯಾಕೆ ಹಂಚಿಕೆ ಮಾಡಿಲ್ಲ ಎಂದು ಟೀಕಿಸಿದರು.
ಪುರಸಭೆಯ ಅಧಿಕಾರ ಬಿಜೆಪಿ ಕೈಯಲ್ಲಿದೆ. ಮನೆ ಹಂಚಿಕೆ ಮಾಡಿ ಇಲ್ಲವೆ ಹೊಲದ ಮಾಲೀಕರಿಗೆ ಹಣ ವಾಪಾಸ್ ಕೊಡಿಸಿ. ಸರ್ಕಾರದ ಹಣವನ್ನು ವಂಚಿಸುವ ಹುನ್ನಾರದಿಂದಾಗಿ ಕಣ್ಣು ಮುಚ್ಚಿ ಕುಳಿತಿದೆ. ಈಗ ಕಾಂಗ್ರೆಸ್ ಪಕ್ಷದವರ ಮೇಲೆ ವೃಥಾ ಆರೋಪ ಮಾಡುವುದರಲ್ಲಿ ಉರುಳಿಲ್ಲ. ಶೀಘ್ರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ವಿತರಿಸಬೇಕು ಎಂದು ಒತ್ತಾಯಿಸಿದರು. ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗಭೂಷಣ, ಮುಖಂಡರಾದ ಮಲ್ಲಯ್ಯ ಮುರಾರಿ, ನಾರಾಯಣಪ್ಪ ಕಾಸ್ಲಿ, ವಿಜಯಕುಮಾರ ಇದ್ದರು.