SL 
ಜಿಲ್ಲೆ

ಭತ್ತ ಖರೀದಿ ವಂಚನೆಯ ತನಿಖೆ ಚುರುಕಾಗಿಸಲು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಆಗ್ರಹ

ಮಸ್ಕಿ: ತಾಲೂಕಿನ ರೈತರಿಂದ ಭತ್ತ ಖರೀದಿ ಮಾಡಿ ಹಣ ನೀಡದೆ ವಂಚನೆ ಮಾಡಿರುವ ಚಿದಾನಂದ ಹೂಗಾರ ಪರಾರಿಯಾಗಿದ್ದು, ಆತನನ್ನು ಪತ್ತೆ ಹಚ್ಚಿ ನ್ಯಾಯ ಕೊಡಿಸಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಒತ್ತಾಯಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನ ವಿವಿಧೆಡೆ ಐದಾರು ವರ್ಷಗಳಿಂದ ಭತ್ತದ ವ್ಯಾಪಾರ ಮಾಡುತ್ತಿರುವ ಚಿದಾನಂದ ಹೂಗಾರ, ಒಂದು ವರ್ಷದಿಂದ ರೈತರಿಗೆ ಹಣ ನೀಡದೆ ಸತಾಯಿಸಿದ್ದಾನೆ. ಕೆಲ ದಿನಗಳ ಹಿಂದೆ ಪರಾರಿಯಾಗಿರುವ ಚಿದಾನಂದ ಹೂಗಾರ, ಲಿಂಗಸುಗೂರು ಬಳಿ ಚಿತ್ತಾಪೂರ ಕೆರೆಗೆ ತನ್ನ ಕಾರನ್ನು ತಳ್ಳಿ ವಿಡಿಯೋ ಮಾಡಿ ಹರಿಬಿಟ್ಟಿರುವ ಬಗ್ಗೆ ಅನುಮಾನವಿದೆ. ಕಾರು ಲಿಂಗಸುಗೂರು ಪೊಲೀಸರ ವಶದಲ್ಲಿದೆ. ಚಿದಾನಂದ ಹೂಗಾರ ನಾಪತ್ತೆಯಾಗಿರುವ ಬಗ್ಗೆ ಆತನ ಕುಟುಂಬಸ್ಥರೇ ಠಾಣೆಗೆ ದೂರು ನೀಡಿದ್ದಾರೆ. 80ಕ್ಕೂ ಹೆಚ್ಚು ರೈತರಿಗೆ ಮೋಸ ಮಾಡಿದ್ದು, ವಂಚನೆಗೆ ಒಳಗಾದ ರೈತರು ಕವಿತಾಳ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿ, ನೊಂದ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಯಲ್ಲಪ್ಪ ಮಾನ್ವಿ, ಬಸವರಾಜ್, ತಿಮ್ಮಣ್ಣ ಕಟಲಿ, ರಮೇಶ್, ಸತ್ಯಬಾಬು, ಸಣ್ಣ ಯಲ್ಲಪ್ಪ, ಅಯ್ಯಪ್ಪ ಚಿಕ್ಕದಿನ್ನಿ, ಮಲ್ಲಪ್ಪ ಸಾಹುಕಾರ್, ನಿಂಗಪ್ಪ, ನಾಗಪ್ಪ, ಮಲ್ಲಯ್ಯ ಮಾನ್ವಿ, ನರಸಪ್ಪ ವಟ್ಟಿ, ಸಣ್ಣ ಯಲ್ಲಪ್ಪ ಪೂಜಾರಿ ಇತರರು ಇದ್ದರು.