ಮಸ್ಕಿಯಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಭಾಸ್ಕರಪ್ರಸಾದ ಬೆಂಗಳೂರು, ಪ್ರಮುಖರಾದ ದೊಡ್ಡಪ್ಪ ಮುರಾರಿ, ಸಿ.ದಾನಪ್ಪ ಇತರರಿದ್ದರು. 
ಜಿಲ್ಲೆ

ಒಳಮೀಸಲಾತಿ ಜಾರಿಗೆ ಅ.2ರ ವರೆಗೆ ಗಡುವು

ಮಸ್ಕಿ: ಒಳಮೀಸಲಾತಿ ಜಾರಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಹೋರಾಟ ಮಾಡುತ್ತಿದರು ಅನುಷ್ಠಾನವಾಗುತ್ತಿಲ್ಲ. ಒಳ ಮೀಸಲಾತಿ ಜಾರಿಯಾಗದಂತೆ ತಡೆದವರು ಅನ್ಯ ಜಾತಿಯ ಸಚಿವರಲ್ಲ. ನಮ್ಮದೆ ದಲಿತ ಜಾತಿಯ ಸಚಿವರು ಅಡ್ಡಗಾಲಾಗಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಭಾಸ್ಕರಪ್ರಸಾದ ಬೆಂಗಳೂರು ಆರೋಪಿಸಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಶುಕ್ರವಾರ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಒಳಮೀಸಲಾತಿ ಐಕ್ಯ ಸಮಿತಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಒಳಮೀಸಲಾತಿ ಜಾರಿಗೆ ಅ.2ರವರೆಗೆ ಗಡುವು ನೀಡಲಾಗುವುದು. ಅನುಷ್ಠಾನ ಮಾಡದಿದ್ದರೆ ಮುಖ್ಯಮಂತ್ರಿ ಹಾಗೂ ದಲಿತ ಸಚಿವರ ಮನೆ ಮುಂಭಾಗ ಹೋರಾಟ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.

ಬೆನ್ನಿಗೆ ಚೂರಿ ಹಾಕುತ್ತಿರುವ ನಾಯಕರ ಬಗ್ಗೆ ದಲಿತರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ನಮ್ಮನ್ನು ಗುಲಾಮರನ್ನಾಗಿ ಮಾಡಿ ತಾವು ರಾಜರಂತೆ ಮೆರೆಯುತ್ತಾರೆ ಎಂದು ದಲಿತ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ಹರಿರಾಮ ವಕೀಲ ಮಾತನಾಡಿ, ಒಳಮೀಸಲಾತಿ ಜಾರಿಗಾಗಿ ಸದಾಶಿವ ಆಯೋಗ ರಚನೆ ಮಾಡಿದ ಸಿದ್ದರಾಮಯ್ಯ ಅವರು ಅನುಷ್ಠಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪದೆ ದಲಿತ ಸಚಿವರಾದ ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಲಾಗುವುದೆಂದು ಕಪಟ ನಾಟಕವಾಡುತ್ತಿದ್ದಾರೆ. ಖರ್ಗೆ ಮತ್ತು ಪರಮೇಶ್ವರ ಸುಪ್ರೀಂಕೋರ್ಟ್‌ಗಿಂತ ದೊಡ್ಡವರಾ? ಎಂದು ಪ್ರಶ್ನಿಸಿದರು. ಸಂತೋಷ ಕೊಡಿಹಳ್ಳಿ, ಬಾಲಸ್ವಾಮಿ ಕೊಡ್ಲಿ, ಅಂಬಣ್ಣ ಆರೋಲಿ, ಆರ್.ಮಾನಸಯ್ಯ ಮಾತನಾಡಿದರು. ಇದಕ್ಕೂ ಮುನ್ನ ಒಳಮೀಸಲಾತಿ ಜಾರಿಗಾಗಿ ಗಾಂಧಿನಗರದ ಡಾ.ಅಂಬೇಡ್ಕರ್ ಪುತ್ತಳಿಯಿಂದ ಭ್ರಮರಾಂಬ ದೇವಸ್ಥಾನದವರೆಗೆ ಬೃಹತ್ ಮೆರವಣಿಗೆ ನಡೆಯಿತು.

ಸಾಹಿತಿ ಸಿ.ದಾನಪ್ಪ ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ ಅಧ್ಯಕ್ಷತೆ ವಹಿಸಿದ್ದರು.ಪ್ರಮುಖರಾದ ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ಹನುಮಂತಪ್ಪ ಮುದ್ದಾಪುರ, ಜೆ.ಬಿ.ರಾಜು, ಶಿವರಾಜ ಅಕ್ಕರಕಿ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪುರ, ಹನುಮಂತಪ್ಪ ಕಾಕರಗಲ್, ಬಾಲಸ್ವಾಮಿ ಜಿನ್ನಾಪುರ ಇತರರಿದ್ದರು.