ಮಸ್ಕಿ: ನವರಾತ್ರಿ ಅಂಗವಾಗಿ ಪಟ್ಟಣದಲ್ಲಿ ಭ್ರಮರಾಂಬ ದೇವಿಗೆ 1008 ಮಹಿಳೆಯರಿಂದ ಕುಂಭಾಭಿಷೇಕ, ಕುಂಕುಮಾರ್ಚಾನೆ, ಸಹಸ್ರ ಬಿಲ್ವಾರ್ಚಾನೆಯೊಂದಿಗೆ ದೇವಿಗೆ ಗುರುವಾರ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ದೇವಿಗೆ ಉಡಿ ತುಂಬಿ ಭಕ್ತಿ ಭಾವದಿಂದ ಸಂತಸಪಟ್ಟರು.
ಪಟ್ಟಣದ ಅಶೋಕ ವೃತ್ತದ ಬಳಿ ದೇವಿಯ ಉತ್ಸವ ಮೂರ್ತಿ ಜಂಬೂ ಸವಾರಿಗೆ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಗಂಗಾಸ್ಥಳದಲ್ಲಿ ದೇವಿ ಮೂರ್ತಿಗೆ ಹಾಗೂ ಕುಂಭಗಳಿಗೆ ಪೂಜೆ ಸಲ್ಲಿಸಲಾಯಿತು. ಜಂಬೂ ಸವಾರಿ ವೀರಭದ್ರೇಶ್ವರ ದೇವಸ್ಥಾನ, ದೈವದಕಟ್ಟೆ, ಮಲ್ಲಿಕಾರ್ಜುನ ದೇವಸ್ಥಾನ, ಕನಕ ವೃತ್ತದಿರಂದ ಭ್ರಮರಾಂಬ ದೇವಸ್ಥಾನಕ್ಕೆ ತಲುಪಿತು. ಗೊರವರ ಕುಣಿತ, ನಂದಿ ಕುಣಿತ ಸೇರಿ ವಿವಿಧ ಕಲಾ ತಂಡಗಳ ನೃತ್ಯ ಪ್ರದರ್ಶನ ಆಗಮಿಸಿದ್ದ ಭಕ್ತರಲ್ಲಿ ಮೈನವಿರೇಳಿಸಿತು.
ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಸಿಪಿಐ ಬಾಲಚಂದ್ರ ಡಿ.ಲಕ್ಕಂ, ಪಿಎಸ್‌ಐ ತಾರಾಬಾಯಿ, ಪುರಸಭೆಯ ಮುಖ್ಯಾಧಿಕಾರಿ ನರಸರಡ್ಡಿ, ಜೆಸ್ಕಾಂ ಎಇಇ ವೆಂಕಟೇಶ, ಪ್ರಮುಖರಾದ ಮಹಾದೇವಪ್ಪಗೌಡ ಪಾಟೀಲ, ಪ್ರಕಾಶ ಧಾರಿವಾಲ, ಸಿದ್ದಲಿಂಗಯ್ಯ ಗಚ್ಚಿನಮಠ, ಅಂದಾನಪ್ಪ ಗುಂಡಳ್ಳಿ, ಶ್ರೀಶೈಲಪ್ಪ ಬ್ಯಾಳಿ, ಬಸನಗೌಡ ಪೊಲೀಸ್ ಪಾಟೀಲ್, ನಾಗರಾಜ ಸಜ್ಜನ್, ಮಲ್ಲಿಕಾರ್ಜುನ ಕ್ಯಾತ್ನಟ್ಟಿ, ಸಿದ್ದಣ್ಣ ಮುಳ್ಳುರು, ಬಸವರಾಜ ಬಾಗೋಡಿ, ವೀರೇಶಪ್ಪ ಬಾಳೆಕಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಗ್ರಾಮದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.