ಮಧುಗಿರಿ: ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳಿಗೆ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಮೆಡಿಕಲ್ ಸ್ಟೋರ್‌ಗಳ ಮಾಲೀಕರಿಗೆ ತಹಸೀಲ್ದಾರ್ ಡಾ.ಜಿ.ವಿಶ್ವನಾಥ್ ದಂಡ ವಿಧಿಸಿದ್ದಾರೆ.
ಕರೊನಾ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆಯ ಕ್ರಮವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಇತ್ತೀಚೆಗೆ ಹೆಚ್ಚಾಗಿ ಬಳಕೆ ಮಾಡುತ್ತಿರುವುದನ್ನೇ ಬಂಡವಾಳನ್ನಾಗಿ ಮಾಡಿಕೊಂಡಿರುವ ಮಧುಗಿರಿ ಪಟ್ಟಣದಲ್ಲಿನ 10ಮೆಡಿಕಲ್ ಸ್ಟೋರ್‌ಗಳಿಗೆ ತಹಸೀಲ್ದಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಕೆಲ ದಾಖಲೆ ಪರೀಶೀಲಿಸಿದರು. ಇವುಗಳಲ್ಲಿ 3 ಮೆಡಿಕಲ್ ಸ್ಟೋರ್ ಮಾಲೀಕರಿಗೆ ಒಟ್ಟು 10 ಸಾವಿರ ದಂಡ ವಿಧಿಸಿದ್ದು ಇನ್ನೂ 6 ಅಂಗಡಿಗಳಲ್ಲಿ ನೋಸ್ಟಾಕ್ ಹಾಗೂ 1 ಮೆಡಿಕಲ್ ಸ್ಟೋರ್‌ನಲ್ಲಿ 20 ರೂಪಾಯಿಗೆ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.
17 ರೂಪಾಯಿ ಬೆಲೆಬಾಳುವ ಮಾಸ್ಕ್‌ಗಳನ್ನು 100 ರೂಪಾಯಿಗೆ ಹಾಗೂ 100 ರೂ. ದರ ನಿಗದಿಪಡಿಸಿರುವ ಸ್ಯಾನಿಟೈಸರ್‌ಗಳನ್ನು 180 ರೂ. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ಕೆಲ ಮೆಡಿಕಲ್ ಸ್ಟೋರ್‌ಗಳ ವಿರುದ್ಧ ದೂರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ, ಅಗತ್ಯ ದರಕ್ಕಿಂತ ಹೆಚ್ಚಿನ ಮೊತ್ತ ಸಂಗ್ರಹಿಸುವುದು ಕಾನೂನು ಬಾಹಿರ. ಮುಂದೆ ದೂರು ಕೇಳಿ ಬಂದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ಮೆಡಿಕಲ್ ಸ್ಟೋರ್ ಮಾಲೀಕರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದರು. ಆಹಾರ ನೀರೀಕ್ಷ ಹೆಚ್.ಗಣೇಶ್, ಪೂರ್ಣಾನಂದಮೆಣಸಿಗೆ, ವಿದ್ಯಾ, ಗೀತಾ, ನಸ್ರುದ್ದೀನ್, ನಂಜುಂಡ ಇತರರು ಇದ್ದರು.