ಕುಷ್ಟಗಿಯ ಮಾರುತಿ ವೃತ್ತದಲ್ಲಿ ಮಾಸ್ಕ್ ಇಲ್ಲದೆ ಓಡಾಡುತ್ತಿರುವ ಬೈಕ್ ಸವಾರರಿಗೆ ದಂಡ ವಿಧಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ. 
ಜಿಲ್ಲೆ

ಮಾಸ್ಕ್ ಇಲ್ಲದೆ ಓಡಾಡುವವರಿಗೆ ದಂಡದ ಬಿಸಿ, ಮೂರು ದಿನಗಳಲ್ಲಿ 34 ಸಾವಿರ ರೂ. ದಂಡ ವಸೂಲಿ

ಕುಷ್ಟಗಿ: ಮಾಸ್ಕ್ ಇಲ್ಲದೆ ಪಟ್ಟಣದಲ್ಲಿ ಓಡಾಡುವವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ಸದ್ಯ ಕಾರ್ಯಾಚರಣೆ ಚುರುಕುಗೊಂಡಿದ್ದು, ಬೈಕ್ ಸವಾರರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸೇರಿ ಮಾಸ್ಕ್ ಇಲ್ಲದೆ ಓಡಾಡುವವರಿಂದ ಮುಲಾಜಿಲ್ಲದೆ ದಂಡ ವಸೂಲಿ ಮಾಡುತ್ತಿದ್ದಾರೆ.

ಕರೊನಾ ಸೋಂಕಿತರ ಹಾಗೂ ಸೋಂಕಿನಿಂದ ಸಾವನ್ನುಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಪೊಲೀಸ್ ಸಿಬ್ಬಂದಿ, ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ನಿಂತು ಕಾರ್ಯಾಚರಣೆ ಮಾಡುತ್ತಿದ್ದಾರೆ.

ವಾರದ ಸಂತೆಯ ದಿನವಾದ ಭಾನುವಾರ ಒಂದೇ ದಿನ 58ಬೈಕ್ ಸವಾರರಿಗೆ ತಲಾ 200 ರೂ.ಗಳಂತೆ ಒಟ್ಟು 11,600ರೂ. ದಂಡ ವಸೂಲಿ ಮಾಡಿದ್ದಾರೆ. ಕಳೆದ 3 ದಿನಗಳಿಂದ ಈ ವರೆಗೆ 170 ಜನರಿಂದ 34 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.

ಪುರಸಭೆಯಿಂದ ಪಡೆದ ದಂಡದ ರಶೀದಿ ಪುಸ್ತಕದಿಂದ ದಂಡ ವಸೂಲಿ ಮಾಡಿ ದಂಡದ ಮೊತ್ತ ಹಾಗೂ ರಶೀದಿ ಪುಸ್ತಕಗಳನ್ನು ಮರಳಿಸಲಾಗುತ್ತಿದೆ. ಕಳೆದ 3ದಿನಗಳಲ್ಲಿ 170ಜನರಿಗೆ ದಂಡ ಹಾಕಲಾಗಿದೆ. ಮಾಸ್ಕ್ ಧರಿಸಬೇಕು ಹಾಗೂ ಮಾಸ್ಕ್ ಧರಿಸಿಕೊಂಡು ಬರುವವರ ಜತೆ ಮಾತ್ರ ವ್ಯವಹರಿಸುವಂತೆ ಬೀದಿ ಬದಿ ವ್ಯಾಪಾರಿಗಳಿಗೆ ತಾಕೀತು ಮಾಡಲಾಗಿದೆ. ಕಾರ್ಯಾಚರಣೆ ನಿರಂತರ ನಡೆಯಲಿದೆ.| ಚಿತ್ತರಂಜನ್ ನಾಯಕ್, ಕುಷ್ಟಗಿ ಪಿಎಸ್‌ಐ