ನಿಪ್ಪಾಣಿಯಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಂದ ಶನಿವಾರ ಅಧಿಕಾರಿಗಳು ದಂಡ ವಸೂಲಿ ಮಾಡಿದರು. 
ಜಿಲ್ಲೆ

ಮಾಸ್ಕ ಧರಿಸದವರಿಗೆ ದಂಡದ ಬಿಸಿ

ನಿಪ್ಪಾಣಿ: ತಾಲೂಕಿನಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾಸ್ಕ್ ಧರಿಸದೇ ಸಂಚರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂಥವರಿಗೆ ತಾಲೂಕಾಡಳಿತ ಸ್ಥಳದಲ್ಲೇ ದಂಡ ಹಾಕಿ ಬಿಸಿ ಮುಟ್ಟಿಸುತ್ತಿದೆ.

ದಂಡ ಹಾಕುವ ಕಾರ್ಯಾಚರಣೆಯಲ್ಲಿ ತಾಲೂಕು ಆಡಳಿತದೊಂದಿಗೆ ನಗರಸಭೆ ಮತ್ತು ಪೊಲೀಸ್ ಇಲಾಖೆಯೇ ಕೈ ಜೋಡಿಸಿದೆೆ. ಶನಿವಾರ ರಸ್ತೆಗಳಲ್ಲಿ ಸಂಚರಿಸಿದ ತಂಡ, ಮಾಸ್ಕ್ ಧರಿಸದವರ ಪತ್ತೆ ಹಚ್ಚಿ ದಂಡ ವಿಧಿಸಿದೆ. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ ಆದೇಶದನ್ವಯ ಅಧಿಕಾರಿಗಳು ದಂಡ ವಿಧಿಸಿದ ಬಳಿಕ, ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದರು.

ತಹಸೀಲ್ದಾರ್ ಪ್ರಕಾಶ ಗಾಯಕವಾಡ, ಪೌರಾಯುಕ್ತ ಮಹಾವೀರ ಬೋರಣ್ಣವರ ಮಾರ್ಗದರ್ಶನದಲ್ಲಿ ನಗರದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣ ಪರಿಸರ, ಅಶೋಕನಗರ, ನಗರಸಭೆ ಪರಿಸರ, ಕೋಠಿವಾಲೆ ಕಾರ್ನರ್ ಸೇರಿ ಮತ್ತಿತರ ಕಡೆಗಳಲ್ಲಿ ಅಧಿಕಾರಿಗಳು ಮಾಸ್ಕ್ ಧರಿಸದೇ ಸಂಚರಿಸುತ್ತಿರುವ ಸಾರ್ವಜನಿಕರಿಗೆ ಶನಿವಾರ 100 ರೂ. ದಂಡ ವಸೂಲಿ ಮಾಡಿದರು. ಮೂರು ದಿನಗಳಲ್ಲಿ 35 ಸಾವಿರ ರೂ. ದಂಡ ವಿಧಿಸಿದ್ದಾರೆ.

ಅಧಿಕಾರಿಗಳು ಜನರಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದರೂ ಸಾರ್ವಜನಿಕರು ಅಸಡ್ಡೆತನ ಮುಂದುವರಿಸಿದ್ದಾರೆ. ಹೀಗಾಗಿ ಇಂಥವರನ್ನು ಪತ್ತೆ ಮಾಡಿ ದಂಡ ಹಾಕುತ್ತಿದ್ದಾರೆ. ಜತೆಗೆ ಸಾರ್ವಜನಿಕರು ತಮ್ಮ ಆರೋಗ್ಯ ದೃಷ್ಟಿಯಿಂದ ಕೋವಿಡ್-19 ನಿಯಮಗಳನ್ನು ಪಾಲಿಸಿ, ಸರ್ಕಾರದ ಜತೆಗೆ ಕೈಜೊಡಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎಎಸ್‌ಐ ಆರ್.ಜಿ. ಕುಂಬಾರ, ಮಾರುತಿ ಕಾಂಬಳೆ, ಶ್ರೀನಿವಾಸ ಸಟಾಲೆ, ಅಜಿತ ಹೊನಜೊಳೆ, ವಿನಾಯಕ ದಾವನೆ, ಅಜಿತ ನಂದರಗಿ, ಜಿತು ಪಾಟೀಲ, ಎಸ್.ಬಿ. ತೊಡ್ಕರ್, ಸತೀಶ ಘಾಟಗೆ, ಸಂದೀಪ ಕಾಂಬಳೆ ಪಾಲ್ಗೊಂಡಿದ್ದರು.

ಹಲವು ಬಾರಿ ಮಾಸ್ಕ್ ಧರಿಸುವಂತೆ ಜನರಿಗೆ ಜಾಗೃತಿ ಮೂಡಿಸಿದರೂ ಜನರು ಮಾಸ್ಕ್ ಹಾಕಿಕೊಳ್ಳದೇ ಸಂಚರಿಸುತ್ತಿದ್ದಾರೆ. ಹೀಗಾಗಿ ದಂಡ ಹಾಕುವ ನಿರ್ಧಾರಕ್ಕೆ ಬಂದಿದ್ದೇವೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ತಿಳಿ ಹೇಳುವುದೇ ದಂಡದ ಉದ್ದೇಶ.| ಪ್ರಕಾಶ ಗಾಯಕವಾಡ ತಹಸೀಲ್ದಾರ್