ಮಂಗಳೂರು: ನಗರದಲ್ಲಿ ಕರೊನಾ ಲಾಕ್‌ಡೌನ್ ಅವಧಿಯಲ್ಲೂ ಸಾರ್ವಜನಿಕರ ಸುರಕ್ಷತೆಗಾಗಿ ಕರ್ತವ್ಯ ನಿರತ 2 ಸಾವಿರ ಪೊಲೀಸರಿಗೆ 10 ಸಾವಿರ ಮಾಸ್ಕ್‌ಗಳನ್ನು ಅವರ ಮನೆಯವರೇ ಸಿದ್ಧಪಡಿಸಿಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಈಗಾಗಲೇ 2,500 ಮಾಸ್ಕ್ ಸಿದ್ಧಗೊಂಡಿವೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ‘ಖಾಕಿ’ ಮಾಸ್ಕ್‌ನ್ನು ನಗರ ಪೊಲೀಸ್ ಲೇನ್‌ನಲ್ಲಿರುವ ಜ್ಞಾನೋದಯ ಮಹಿಳಾ ಮಂಡಳಿ ಕಟ್ಟಡದಲ್ಲಿ ಮಂಡಳಿ ಅಧ್ಯಕ್ಷೆ ಭಾಗೀರಥಿ, ಸುಶೀಲಾ, ಸುನೀತಾ, ನೇತ್ರಾವತಿ, ಪೂರ್ಣಿಮಾ, ತನುಜಾ, ಆಶಾ ಮತ್ತು ಪೂರ್ಣಿಮಾ ಎಸ್. ಹೊಲಿಯುತ್ತಿದ್ದಾರೆ.
ಗೃಹಿಣಿಯರು ಮನೆ ಕೆಲಸ ಮುಗಿದ ನಂತರ ಬಟ್ಟೆ ಹೊಲಿಯುವುದು, ಎಂಬ್ರಾಯ್ಡರಿ ಮೊದಲಾದ ಕಾಯಕವನ್ನೂ ಮಾಡುತ್ತ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಗುತ್ತಿದ್ದರು. ಈಗ ಕರೊನಾ ಉಲ್ಬಣವಾಗುತ್ತಿರುವ ಸಂದರ್ಭ ತಮ್ಮವರಿಗೆ ಹಾಗೂ ಇತರ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ತಯಾರಿಸಲು ತೀರ್ಮಾನಿಸಿದರು. ಇದು ಪೊಲೀಸ್ ಅಧಿಕಾರಿಗಳು, ಆಯುಕ್ತರ ಕಿವಿಗೂ ಬಿದ್ದಿದೆ.
ಗೌರವ ಧನ ನೀಡಲು ನಿರ್ಧಾರ: ಮಾಸ್ಕ್ ಸಿದ್ಧಪಡಿಸುತ್ತಿದ್ದ ಮಹಿಳಾ ಮಂಡಳಿ ಕಚೇರಿಗೆ ಭೇಟಿ ನೀಡಿದ ಆಯುಕ್ತ ಎನ್. ಶಶಿಕುಮಾರ್ ಮೆಚ್ಚುಗೆ ಸೂಚಿಸಿದ್ದು, ಎಂಟು ಮಂದಿ ಮಹಿಳೆಯರಿಗೆ ಗೌರವಧನ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಉಚಿತವಾಗಿ ಪೊಲೀಸರಿಗೆ ಮಾಸ್ಕ್ ಹೊಲಿದುಕೊಡಲು ಮುಂದೆ ಬಂದಿದ್ದಾರೆ. ಅವರಿಗೆ ಕರೊನಾ ಸಂದರ್ಭ ಒಂದಿಷ್ಟು ಆರ್ಥಿಕವಾಗಿಯೂ ನೆರವಾಗಬೇಕೆಂಬ ಉದ್ದೇಶದಿಂದ ಗೌರವಧನ ನೀಡಲು ನಿರ್ಧರಿಸಿದ್ದೇವೆ. ನಗರ ವ್ಯಾಪ್ತಿಯಲ್ಲಿ 2000 ಪೊಲೀಸರಿದ್ದು, ತಲಾ 5ರಂತೆ ಒಟ್ಟು 10 ಸಾವಿರ ಮಾಸ್ಕ್ ತಯಾರಿಸಿ ಕೊಡಲು ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ದಿನಕ್ಕೆ ಪ್ರಸ್ತುತ 75ರಿಂದ 80 ಮಾಸ್ಕ್‌ಗಳನ್ನು ತಯಾರಿಸುತ್ತಿದ್ದೇವೆ. ಟೈಲರಿಂಗ್‌ನ್ನು ಇದೇ ಮಹಿಳಾ ಮಂಡಳಿಯ ತರಬೇತಿ ಕಾರ್ಯಕ್ರಮದಲ್ಲಿ ಕಲಿತುಕೊಂಡಿದ್ದೆವು. ಸದ್ಯ 2,500ರಷ್ಟು ಮಾಸ್ಕ್‌ಗಳು ಸಿದ್ಧವಾಗಿವೆ. 10 ಸಾವಿರ ಮಾಸ್ಕ್ ಸಿದ್ಧಪಡಿಸಲು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಅಗತ್ಯ ಖಾಕಿ ಬಟ್ಟೆಯನ್ನೂ ಒದಗಿಸಿಕೊಡುತ್ತಿದ್ದಾರೆ. ಬಟ್ಟೆ ಮಾಸ್ಕ್‌ಗೆ ಉತ್ತಮವಾಗಿರುವುದರಿಂದ ಸಿಂಗಲ್ ಲೇಯರ್ ಮಾಸ್ಕ್‌ಗಳನ್ನು ಸಿದ್ಧಪಡಿಸುತ್ತಿದ್ದೇವೆ.
ಭಾಗೀರಥಿ, ಜ್ಞಾನೋದಯ ಮಹಿಳಾ ಮಂಡಳಿ