ಜಿಲ್ಲೆ

ಎನ್.ಆರ್.ಪುರ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ

Chikkamagaluru

ಎನ್.ಆರ್.ಪುರ: ಕರೊನಾ ಭೀತಿ ಹಿನ್ನೆಲೆಯಲ್ಲಿ ಪಟ್ಟಣದ ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ಧರಿಸಿಕೊಂಡು ಬರುವಂತೆ ಒತ್ತಾಯಿಸುತ್ತಿರುವುದರಿಂದ ಪಟ್ಟಣದಲ್ಲಿ ಮಾಸ್ಕ್​ಗೆ ಬೇಡಿಕೆ ಹೆಚ್ಚಾಗಿದೆ.

ಪಟ್ಟಣದ ಬೆರಳೆಣಿಕೆಯಷ್ಟು ಮೆಡಿಕಲ್ ಶಾಪ್​ಗಳಲ್ಲಿ ಈಗಾಗಲೇ ಮಾಸ್ಕ್​ಗಳು ಲಭ್ಯವಿಲ್ಲದಂತಾಗಿದೆ. ಇರುವ ಮಾಸ್ಕ್​ಗಳನ್ನು ದುಪ್ಪಟ್ಟು ದರಗಳಿಗೆ ಮಾರಾಟ ಮಾಡಲಾಗುತ್ತಿದೆ. ಕರೊನಾ ಸೋಂಕಿತರು, ಶಂಕಿತರು ಮಾತ್ರ ಮಾಸ್ಕ್​ಗಳನ್ನು ಧರಿಸಬೇಕು ಎಂದು ಸರ್ಕಾರ ಸೂಚಿಸಿದರೂ ಕೆಲ ಶಾಲೆಗಳ ಆಡಳಿತ ಮಂಡಳಿ ಮಾಸ್ಕ್ ಧರಿಸಿಕೊಂಡು ಬರುವಂತೆ ವಿದ್ಯಾರ್ಥಿಗಳಿಗೆ ತಿಳಿಸಿರುವುದರಿಂದ ಮಾಸ್ಕ್​ಗಳಿಗೆ ಎಲ್ಲಿದ ಬೇಡಿಕೆ ಸೃಷ್ಟಿಯಾಗಿದೆ. ವಿನಾಕಾರಣ ಜನರಲ್ಲಿ ಹೆದರಿಕೆ ಹುಟ್ಟಿಸುವ ಕಾರ್ಯವಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.

ಎಲ್ಲರೂ ಮಾಸ್ಕ್ ಧರಿಸಬೇಕಿಲ್ಲ. ವೈರಸ್ ಸೋಂಕಿತರು ಮಾತ್ರ ಮಾಸ್ಕ್ ಧರಿಸಬೇಕು. ಮಾಸ್ಕ್ ಮೆಡಿಕಲ್​ಗಳಲ್ಲಿ ಲಭ್ಯವಿಲ್ಲ. ಅದಕ್ಕಾಗಿ ಆಸ್ಪತ್ರೆಗೆ ಬಹಳಷ್ಟು ಜನ ಮಾಸ್ಕ್ ಕೇಳಿಕೊಂಡು ಬರುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಸಿಬ್ಬಂದಿಗೆ ಮಾತ್ರ ಮಾಸ್ಕ್ ನೀಡುತ್ತೇವೆ. ಬಿಇಒ ಜತೆ ಮಾತನಾಡಿ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡದಿರಲು ಕ್ರಮ ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ವೀರಪ್ರಸಾದ್.