ಜಿಲ್ಲೆ

ಮಸೀದಿಗಳಲ್ಲಿ ನಡೆಸುವ ಪ್ರಾರ್ಥನೆಯಲ್ಲಿ ಐದಕ್ಕಿಂತ ಹೆಚ್ಚು ಜನ ಸೇರಬೇಡಿ : ತಹಸೀಲ್ದಾರ್ ಮಂಜುನಾಥ ಭೋಗಾವತಿ ಮನವಿ

ಸಿಂಧನೂರು: ಕರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೆ ಮಸೀದಿಗಳಲ್ಲಿ ನಡೆಸುವ ಪ್ರಾರ್ಥನೆಯಲ್ಲಿ ಐದಕ್ಕಿಂತ ಹೆಚ್ಚು ಜನ ಭಾಗವಹಿಸದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ಮಂಜುನಾಥ ಭೋಗಾವತಿ ಮನವಿ ಮಾಡಿದರು.

ನಗರದ ತಹಸಿಲ್ ಕಚೇರಿಯಲ್ಲಿ ಸೋಮವಾರ ಮುಸ್ಲಿಂ ಮುಖಂಡರ ಸಭೆ ನಡೆಸಿ ಮಾತನಾಡಿದರು. ಕರೊನಾ ವೈರಸ್ ನಿಯಂತ್ರಣ ಹಿನ್ನಲೆಯಲ್ಲಿ ಎಲ್ಲ ಮಸೀದಿಗಳಲ್ಲಿ ಕೇವಲ ಐದು ಜನರು ಮಾತ್ರ ಭಾಗವಹಿಸಬೇಕು. ಐದು ನಿಮಿಷದಲ್ಲಿ ಪ್ರಾರ್ಥನೆ ಮುಗಿಸಬೇಕು ಎಂದು ಸೂಚಿಸಿದರು. ತಾಲೂಕು ಆಡಳಿತ ಹೇಳುವುದಕ್ಕಿಂತ ಸ್ವಯಂ ಆಗಿ ಸಹಕಾರ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜನತಾ ಕರ್ಫ್ಯೂಗೆ ಅಪಾರ ಬೆಂಬಲ ವ್ಯಕ್ತವಾಗಿದೆ. ಮುಂದೆಯೂ ಎಲ್ಲ ರೀತಿಯ ಸಹಕಾರ ನೀಡಬೇಕೆಂದು ತಿಳಿಸಿದರು. ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್‌ಐ ವಿಜಯಕೃಷ್ಣ, ಮುಖಂಡರಾದ ಬಾಬರಪಾಷಾ, ನದೀಮ್‌ಮುಲ್ಲಾ, ಬಾಬರ ಪಟೇಲ್, ಜಿಲಾನಿಪಾಷಾ, ಜಹೀರುಲ್ಲಾ ಹಸನ್, ಮುರ್ತುಜ್‌ಹುಸೇನ್, ಖಾಜಿ ಮಲ್ಲಿಕ್ ವಕೀಲ ಇದ್ದರು.

ಅಂಬಾದೇವಿ ದೇವಸ್ಥಾನ ಬಂದ್
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೊಳಪಡುವ ಅಂಬಾಮಠದ ಶ್ರೀ ಅಂಬಾದೇವಿ ದೇವಸ್ಥಾನದಲ್ಲಿ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಕ್ತಾಧಿಗಳು ಹಾಗೂ ಸಾರ್ವಜನಿಕ ಹಿತ ದೃಷ್ಟಿಯಿಂದ ದೇವಸ್ಥಾನದಲ್ಲಿ ನಡೆಯುವ ಎಲ್ಲ ಸೇವೆ, ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಪ್ರಸಾದ, ದಾಸೋಹ, ತೀರ್ಥ ವಿತರಣೆ ಹಾಗೂ ದೇವರ ದರ್ಶನ ದೇವಾಲಯಗಳಲ್ಲಿ ವಸತಿ, ಅತಿಥಿ ಗೃಹಗಳನ್ನು ಸಾರ್ವಜನಿಕರು, ಭಕ್ತಾಧಿಗಳಿಗೆ ಹಂಚಿಕೆ ಮಾಡುವುದನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ. ಎಲ್ಲರೂ ಸಹಕರಿಸಬೇಕೆಂದು ಶ್ರೀ ಅಂಬಾದೇವಿ ದೇವಸ್ಥಾನ ಸಮಿತಿ ಆಡಳಿತಾಧಿಕಾರಿ ಮಂಜುನಾಥ ಭೋಗಾವತಿ ತಿಳಿಸಿದ್ದಾರೆ.