ವಲೇರಿಯನ್ ಮೆಂಡೋನ್ಸಾ ಗಿಡಗಳ ನಿರ್ವಹಣೆಯಲ್ಲಿ ತೊಡಗಿದ್ದಾರೆ. 
ಜಿಲ್ಲೆ

ಹಸಿರಿನ ಕನಸಿಗೆ ಜೀವ ತುಂಬುತ್ತಿರುವ ವಲೇರಿಯನ್ ಮೆಂಡೋನ್ಸಾ

ಹರೀಶ್ ಮೋಟುಕಾನ ಮಂಗಳೂರು
ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು ಎಂಬುದನ್ನು ಮಂಗಳೂರಿನ ಮೇರಿಹಿಲ್ ನಿವಾಸಿ ವಲೇರಿಯನ್ ಮೆಂಡೋನ್ಸಾ ತಮ್ಮ ಕಾರ್ಯದ ಮೂಲಕ ಸಾಬೀತುಪಡಿಸಿದ್ದಾರೆ. ಪ್ರಕೃತಿಯ ಮೇಲಿನ ಅಪಾರ ಪ್ರೀತಿ ಹಾಗೂ ಪರಿಸರದ ಬಗ್ಗೆ ಕಾಳಜಿಯಿಂದ ಅವರು ಈಗಾಗಲೇ 250ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸಿದ್ದು, ಪರಿಸರ ಸಂರಕ್ಷಣೆಯ ಯೋಧರಾಗಿ ಗುರುತಿಸಿಕೊಂಡಿದ್ದಾರೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು ಅಲ್ಲಿ ಸ್ವಚ್ಛ ಪರಿಸರವನ್ನು ಕಂಡವರು. ತಾಯ್ನೆಲದಲ್ಲೂ ಪರಿಸರಕ್ಕೆ ತನ್ನಿಂದಾದ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಕಳೆದ 15 ವರ್ಷಗಳಿಂದ ನಿರಂತರವಾಗಿ ಗಿಡಗಳನ್ನು ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಮೇರಿಹಿಲ್ ಹೆಲಿಪ್ಯಾಡ್ ಪರಿಸರದಲ್ಲಿ 250ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸಿರುವ ಅವರು, ಹಸಿರು ಪರಿಸರ ನಿರ್ಮಾಣದ ಕನಸಿಗೆ ಜೀವ ತುಂಬುತ್ತಿದ್ದಾರೆ. ಫಲ ಬರುವ ಗಿಡ, ಮಾವು, ಹಲಸು, ನೇರಳೆ ಮೊದಲಾದ ಹಣ್ಣಿನ ಗಿಡಗಳಿಗೆ ಆದ್ಯತೆ ನೀಡಿ ಬೆಳೆಸುತ್ತಿದ್ದಾರೆ. ಮನೆಯ ಎದುರಿನ ಜಾಗದಲ್ಲಿ ಹಸಿರು ಕಾಡನ್ನೇ ಸೃಷ್ಟಿಸಿದ್ದಾರೆ.
ಗಿಡ ನೆಡುವುದಷ್ಟೇ ಅಲ್ಲ, ಬೆಳೆಸುವ ಕಾಳಜಿ
ಬಹುತೇಕ ಸಂದರ್ಭಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ನಂತರ ಅವುಗಳ ಆರೈಕೆ ಆಗದೆ ಒಣಗಿ ಹೋಗುತ್ತವೆ. ವಲೇರಿಯನ್ ಮೆಂಡೋನ್ಸಾ ಅವರ ಕಾರ್ಯ ವಿಭಿನ್ನವಾಗಿದೆ. ಅವರು ನೆಟ್ಟ ಪ್ರತಿಯೊಂದು ಗಿಡವೂ ಮರವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಬೇಸಗೆಯಲ್ಲಿ ನೀರುಣಿಸುವುದು, ರಕ್ಷಣೆ ಒದಗಿಸುವುದು ಹಾಗೂ ನಿಯಮಿತ ಆರೈಕೆ ಮಾಡುವುದನ್ನು ತಮ್ಮ ಜವಾಬ್ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಗಿಡ ನೆಡುವುದು ಮೊದಲ ಹೆಜ್ಜೆ ಮಾತ್ರ. ಅದು ಮರವಾಗಿ ಬೆಳೆದು ಪರಿಸರಕ್ಕೆ ಕೊಡುಗೆ ನೀಡುವವರೆಗೆ ಅದರ ಜವಾಬ್ದಾರಿ ನಮ್ಮದೇ ಎಂಬುದು ಅವರ ನಂಬಿಕೆ.
ಹಸಿರು ಯೋಧ ಸಮಾಜಕ್ಕೆ ಪ್ರೇರಣೆ
ಒಬ್ಬ ವ್ಯಕ್ತಿಯ ಸಂಕಲ್ಪ ಎಷ್ಟೊಂದು ದೊಡ್ಡ ಬದಲಾವಣೆ ತರಬಲ್ಲದು ಎಂಬುದಕ್ಕೆ ವಲೇರಿಯನ್ ಮೆಂಡೋನ್ಸಾ ಕಾರ್ಯವೇ ಸಾಕ್ಷಿಯಾಗಿದೆ. ಯಾವುದೇ ದೊಡ್ಡ ಸಂಸ್ಥೆಯ ಬೆಂಬಲವಿಲ್ಲದೆ, ಪ್ರಚಾರದ ನಿರೀಕ್ಷೆಯಿಲ್ಲದೆ ಅವರು ಪರಿಸರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಸ್ಥಳೀಯರಾದ ನಿವೃತ್ತ ಪಿಎಸ್‌ಐ ಹರೀಶ್ ಪದವಿನಂಗಡಿ, ಅಮಿತ್ ಉಚ್ಚಿಲ್ ಹಾಗೂ ಎ.ಜಿ. ಶರ್ಮ ನೀರಿನ ವ್ಯವಸ್ಥೆ ಮಾಡಿ ಗಿಡಗಳ ನಿರ್ವಹಣೆಗೆ ಸಹಕಾರ ನೀಡುತ್ತಿದ್ದಾರೆ.
ನಾವು ಮಾಡುವ ಪರಿಸರದ ಕೆಲಸ ನೋಡಿ ಇನ್ನೊಬ್ಬರು ಒಂದು ಗಿಡ ನೆಟ್ಟು ಬೆಳೆಸಿದರೆ ಅದೇ ನಮಗೆ ಸಾರ್ಥಕ. ಪರಿಸರದ ಮೇಲೆ ಕಾಳಜಿ ವಹಿಸಬೇಕು. ಪ್ಲಾಸ್ಟಿಕ್ ನೆಲ, ಜಲಕ್ಕೆ ಸೇರದಂತೆ ಎಚ್ಚರ ವಹಿಸಬೇಕಾಗಿದೆ. ತಪ್ಪಿದರೆ ಭವಿಷ್ಯದಲ್ಲಿ ಆಪತ್ತು ತಪ್ಪಿದಲ್ಲ. ಒಬ್ಬ ವ್ಯಕ್ತಿ ನೆಡುವ ಒಂದು ಗಿಡವೂ ಭವಿಷ್ಯದಲ್ಲಿ ನೂರಾರು ಜನರಿಗೆ ನೆರಳಾಗಬಹುದು.
ವಲೇರಿಯನ್ ಮೆಂಡೋನ್ಸಾ, ಪರಿಸರ ಪ್ರೇಮಿ, ಮೇರಿಹಿಲ್