ಅಥಣಿ: ಸರ್ವಧರ್ಮೀಯರ ಹೃದಯ ಗೆದ್ದ ಮೌನಯೋಗಿ ಮರುಳಶಂಕರ ದೇವರು ಈ ಭಾಗದ ನಡೆದಾಡುವ ದೇವರಾಗಿದ್ದರು ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಬಣ್ಣಿಸಿದರು.
ಗಚ್ಚಿನಮಠದಲ್ಲಿ ಮಂಗಳವಾರ ಜರುಗಿದ ಲಿಂ. ಮರುಳಶಂಕರ ದೇವರ 12ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಮರುಳಶಂಕರ ದೇವರು ಜಲಮೂಲದ ತಜ್ಞರಾಗಿ, ಸಂಗೀತಗಾರರಾಗಿ ತಮ್ಮ ಪ್ರಭಾವ ಬೀರಿದರು. ಸಾವಿರಾರು ರೈತರಿಗೆ ನೀರಿನ ಮೂಲ ಹೇಳಿದ್ದರಿಂದ ಇಂದು ಅನ್ನದಾತರು ಸುಖಿಯಾಗಿದ್ದಾರೆ ಎಂದರು.
ಮರುಳಶಂಕರ ದೇವರ ಕರ್ತೃ ಗದ್ದುಗೆಗೆ ಪೂಜೆ ನಂತರ ಅವರ ಭಾವಚಿತ್ರದ ಪಲ್ಲಕ್ಕಿ ಉತ್ಸವ ಪಟ್ಟಣದಲ್ಲಿ ಜರುಗಿತು. ಭಕ್ತರಿಗೆ ಪ್ರಸಾದ ಏರ್ಪಡಿಸಲಾಗಿತ್ತು.ಮಲ್ಲಿಕಾರ್ಜುನ ಮಗದುಮ್ಮ, ಶಿವಯೋಗಿ ಅಳಿಮಟ್ಟಿ, ವೀರಯ್ಯ ಘಂಟಿಮಠ, ಸಂಗಯ್ಯ ಕಲ್ಮಠ, ಸೋಮು ವಾಂಗಿ, ರಮೇಶ ಮಾಳಿ, ಶ್ರೀಶೈಲ ಹಳ್ಳದಮಳ ಇತರರಿದ್ದರು.