ಹರಪನಹಳ್ಳಿ: ಶರಣ ಸಂಸ್ಕೃತಿ ಇಲ್ಲದಿದ್ದರೆ ಮೂಢನಂಬಿಕೆ, ಮೌಢ್ಯತೆ ಮತ್ತು ಕಂದಾಚಾರಗಳ ಸುಳಿಯಲ್ಲಿ ಸಿಕ್ಕಿ ಹಲವು ಸಮುದಾಯಗಳು ನಲುಗಿ ಹೋಗುತ್ತಿದ್ದವು ಎಂದು ವಕೀಲ ಕಣಿವಿಹಳ್ಳಿ ಮಂಜುನಾಥ ಹೇಳಿದರು.
ಇದನ್ನೂ ಓದಿ:ಭಾರತೀಯ ಸಂಸ್ಕೃತಿಯ ಪ್ರತೀಕ
ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವದ ಮಹತ್ತರ ಆಲೋಚನೆಗಳನ್ನು ಅನುಭವ ಮಂಟಪದಿಂದಲ್ಲೇ ಆರಂಭಿಸಿದ್ದರು. ಚೌಡಯ್ಯ ಅವರು ತಮ್ಮ ಹೆಸರಿನ ಅಂಕಿತನಾಮದ ವಚನಗಳಿಂದ ಕಂದಾಚಾರಕ್ಕೆ ಕಡಿವಾಣ ಹಾಕಲು ದುಡಿದವರು. ಕಲ್ಲು-ಮಣ್ಣಿನಲ್ಲಿ ದೇವರಿಲ್ಲ, ಸಾತ್ವಿಕ ಬದುಕಿನ ಕಾಯದಲ್ಲೇ ದೇವರನ್ನು ಕಾಣಬೇಕು ಎಂದರು. ಇದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಲಾಗದು, ಹುಟ್ಟಿದ ಜಾತಿಯಲ್ಲೇ ಕಾಯಕ ನಿಷ್ಠೆಯಿಂದ ನಾಡಿನ ಏಳಿಗೆಗೆ ಶ್ರಮಿಸಿ ಸಾರ್ಥಕತೆ ಕಾಣಬೇಕಿದೆ ಎಂದರು.
ಪುರಸಭೆ ನಾಮನಿರ್ದೇಶಕ ಹೇಮಣ್ಣ ಮೋರಗೇರಿ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆಧುನಿಕತೆಗೆ ಹೊಂದಿಕೊಂಡು ಬುದ್ಧಿವಂತರಾಗುತ್ತಿದ್ದಾರೆ. ಆದರೆ, ಸಂಸ್ಕಾರದಿಂದ ದೂರವಾಗುತ್ತಿರುವುದು ವಿಷಾದನೀಯ. ತಂದೆ-ತಾಯಿಯನ್ನು ಗೌರವದಿಂದ ಕಾಣದವರು ಸಿನಿಮಾ ನಟರನ್ನು ಪ್ಲೆಕ್ಸ್‌ಗಳಲ್ಲಿ ಬಿಂಬಿಸಿ ಸಂತೋಷ ಪಡುತ್ತಿದ್ದಾರೆ. ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿದ್ದರೆ ಭೂಮಿ ಮೇಲೆ ಹುಟ್ಟಿದ್ದಕ್ಕೂ ಸಾರ್ಥಕತೆ ಪಡೆಯುತ್ತೀರಿ. ದೇವರ ಹೆಸರಿನಲ್ಲಿ ಪ್ರಾಣಿ ಬಲಿಕೊಡುವುದನ್ನು ಬಿಡಿ. ಹಿಂದೆ ಮನೆಯಲ್ಲೇ ಜನನ ಮನೆಯಲ್ಲೇ ಮರಣ, ಈಗ ಆಸ್ಪತ್ರೆಯಲ್ಲೇ ಜನನ ಆಸ್ಪತ್ರೆಯಲ್ಲೇ ಮರಣ ಎನ್ನುವಂತಾಗಿದೆ, ಇನ್ನು ಎಚ್ಚೆತ್ತುಕೊಳ್ಳದಿದ್ದರೆ ಬದುಕು ಕಷ್ಟವಾಗುತ್ತದೆ ಎಂದರು.
ಬೆಣ್ಣೆಹಳ್ಳಿ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಬಸವರಾಜಪ್ಪ ಮಾತನಾಡಿದರು.