ಜಿಲ್ಲೆ

ಹುತಾತ್ಮರ ಆಶಯಗಳ ಹಾದಿಯಲ್ಲಿ ಸಾಗೋಣ

ಸಿಂಧನೂರು: ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಭೌತಿಕವಾಗಿ ಹತ್ಯೆ ಮಾಡಿರಬಹುದು. ಆದರೆ, ಕಲಬುರ್ಗಿ ಅವರ ಸತ್ಯ ಸಂಶೋಧನೆಗೆ ಯಾವತ್ತೂ ಸಾವಿಲ್ಲ ಎಂದು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ರಾಷ್ಟ್ರೀಯ ಸಂಚಾಲಕ ಪಶ್ಚಿಮ ಬಂಗಾಳದ ಅಸೀಮಗಿರಿ ಹೇಳಿದರು.

ನಗರದ ಎಪಿಎಂಸಿ ಶ್ರಮಿಕ ಭವನದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಡಾ.ಎಂ.ಎಂ.ಕಲಬುರ್ಗಿ ಅವರ 8ನೇ ಪುಣ್ಯ ಸ್ಮರಣಾರ್ಥ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಸತ್ಯದ ಪ್ರತಿಪಾದಕರೆಲ್ಲರನ್ನೂ ಒಂದೇ ತೆರನಾಗಿ ಹತ್ಯೆ ಮಾಡಲಾಗಿದೆ. ದಾಭೋಲ್ಕರ್, ಪನ್ಸಾರೆ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ ವೈಚಾರಿಕ ಸಂಘರ್ಷಗಳಿಗೆ ಹೆದರಿದ ತೀವ್ರ ಬಲ ಪಂಥೀಯವಾದಿಗಳು ಭೌತಿಕವಾಗಿ ಹತ್ಯೆ ಮಾಡಿರಬಹುದು, ಆದರೆ, ಸತ್ಯಕ್ಕೆ ಸಾವಿಲ್ಲ ಎಂಬುದನ್ನು ಮರೆತಿದ್ದಾರೆ. ಜನತೆಗಾಗಿ ಮಡಿದ ಹುತಾತ್ಮರ ಆಶಯಗಳ ಹಾದಿಯಲ್ಲಿ ಮುನ್ನಡೆದು ಕೋಮುವಾದಿಗಳ ಜನದ್ರೋಹಿ ಹುನ್ನಾರಗಳನ್ನು ಬಯಲುಗೊಳಿಸುವ ಕಾರ್ಯಭಾರಗಳಿಗೆ ಹೆಗಲೊಡ್ಡೋಣವೆಂದು ಹೇಳಿದರು.

ಬಸವ ಕೇಂದ್ರದ ಸದಸ್ಯ ವೀರಭದ್ರಗೌಡ ಅಮರಾಪೂರ ಮಾತನಾಡಿ, ಲಿಂಗಾಯತ ಧರ್ಮದ ಸತ್ಯಾನ್ವೇಷಣೆ ಕೈಗೊಂಡಿದ್ದ ಡಾ. ಎಂ.ಎಂ.ಕಲಬುರ್ಗಿ ಅವರನ್ನು ಇನ್ನಿಲ್ಲವಾಗಿಸಿದ್ದಾರೆ. ಆದರೆ, ಕಲಬುರ್ಗಿ ಅವರು ನಡೆದ ಹಾದಿಯನ್ನು ಅಳಿಸಿ ಹಾಕಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದರು.
ಕವಿ ಸಿ.ದಾನಪ್ಪ ನಿಲೋಗಲ್, ಪ್ರಮುಖರಾದ ಎಚ್.ಎನ್.ಬಡಿಗೇರ, ರಂಜಿತ್ ಮುಜುಂದಾರ್, ಎಂ.ಗಂಗಾಧರ, ಆದೇಶ ನಗನೂರು, ಚಿನ್ನಪ್ಪ ಕೊಟ್ರಿಕಿ, ಅಜೀಜ್ ಜಾಗೀರದಾರ್, ಸಂತೋಷ್, ಮಾರುತಿ, ಚಿದಾನಂದ, ಸೋಮು, ಮಾಬುಸಾಬ್ ಬೆಳ್ಳಟ್ಟಿ, ಎಚ್.ಆರ್.ಹೊಸಮನಿ, ಉಷಾ ಎಂ.ಜಿ., ರುಕ್ಮೀಣೆಮ್ಮ, ಮುದಿಯಪ್ಪ, ಅಪ್ಪಣ್ಣ, ವೆಂಕಟೇಶ ಇದ್ದರು.