ಚಿಕ್ಕಮಗಳೂರು: ಕರೊನಾ ಸೋಂಕು ಹೆಚ್ಚುತ್ತಿರುವುದರಿಂದ ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಒಳಗೊಂಡ ಮಾರ್ಷಲ್ ತಂಡಗಳನ್ನು ರಚಿಸುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಹಸೀಲ್ದಾರರಿಗೆ ನಿರ್ದೇಶನ ನೀಡಿದ್ದಾರೆ. ಹಿರಿಯ ಆರೋಗ್ಯಾಧಿಕಾರಿ, ತಾಪಂ ಅಭಿವೃದ್ಧಿ ಕಾರ್ಯದರ್ಶಿ, ನಗರ ಸ್ಥಳೀಯ ಸಂಸ್ಥೆಯ ಆರೋಗ್ಯ ನಿರೀಕ್ಷಕ, ಗ್ರಾಮ ಲೆಕ್ಕಿಗರು ಹಾಗೂ ಪೊಲೀಸ್ ಕಾನ್ಸ್ ಟೇಬಲ್ ಈ ಮಾರ್ಷಲ್ ತಂಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ತರೀಕೆರೆ, ಅಜ್ಜಂಪುರ ತಾಲೂಕುಗಳಲ್ಲಿ ತಲಾ ಎರಡರಂತೆ ಮತ್ತು ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ತಲಾ ಒಂದರಂತೆ, ಕಡೂರು ತಾಲೂಕಿನಲ್ಲಿ ಮೂರರಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರ ಜತೆ ಸಮನ್ವಯ ಸಾಧಿಸಿ ತಂಡ ರಚಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸಾರ್ವಜನಿಕ ಅರಿವಿಗೆ ಕ್ರಮ:
ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸದೆ ಸಂಚರಿಸುವವರಿಗೆ ಮಾಸ್ಕ್ ಧರಿಸುವ ಕುರಿತು ಅರಿವು ಮೂಡಿಸುವುದರ ಜತೆಗೆ ಸರ್ಕಾರದ ನಿರ್ದೇಶನದಂತೆ ದಂಡ ವಿಧಿಸಿ ಕ್ರಮ ಕೈಗೊಳ್ಳಲು ಮಾರ್ಷಲ್ ತಂಡಕ್ಕೆ ಅಧಿಕಾರ ನೀಡಲಾಗಿದೆ. ಯಾವುದೇ ವ್ಯಕ್ತಿ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂದರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ವಿನಃ ಕಾರಣ ಹೊರಗಡೆ ಸಂಚರಿಸದಂತೆ ಅರಿವು ಮೂಡಿಸುವುದು ಈ ತಂಡದ ಕಾರ್ಯ.
ಹೊರ ರಾಜ್ಯದವರ ಮೇಲೆ ನಿಗಾ:
ಕೇರಳ, ಮಹಾರಾಷ್ಟ್ರ, ಪಂಜಾಬ್, ಚಂಡೀಗಢ ಸೇರಿ ಹೊರಗಿನಿಂದ ಆಗಮಿಸಿದವರು ಹಾಗೂ ಪ್ರವಾಸಿಗರು ಕಂಡು ಬಂದಲ್ಲಿ ಕಡ್ಡಾಯವಾಗಿ 72 ಗಂಟೆಗಳ ಒಳಗಾಗಿ ಪಡೆದಿರುವ ಆರ್‍ಟಿಪಿಸಿಆರ್ ನೆಗೆಟಿವ್ ಟೆಸ್ಟ್ ವರದಿ ಹೊಂದಿರುವ ಬಗ್ಗೆ ಪರಿಶೀಲಿಸಿ ದೃಢಪಡಿಸಬೇಕು ಎಂದು ಸೂಚಿಸಲಾಗಿದೆ. ಸಾರ್ವಜನಿಕ ಪ್ರದೇಶಗಳಾದ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಅಂಗಡಿ ಮುಂಗಟ್ಟು ಇತ್ಯಾದಿ ಸ್ಥಳಗಳಲ್ಲಿ ಮಾಲೀಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಪರಿಶೀಲಿಸಬೇಕು. ಈ ಬಗ್ಗೆ ಕೈಗೊಂಡ ಕ್ರಮದ ಕುರಿತು ತಹಸೀಲ್ದಾರ್ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಡಿಸಿ ಮಾರ್ಗದರ್ಶನ ನೀಡಿದ್ದಾರೆ.
ಹಬ್ಬ-ಹರಿದಿನ ಗುಂಪುಗೂಡಲು ತಡೆ:
ಕರೊನಾ ಸೋಂಕು ಹರಡದಂತೆ ತಡೆಯಲು ಹಬ್ಬ-ಹರಿದಿನಗಳಲ್ಲಿ ಜನರು ಗುಂಪುಗೂಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ. ಯುಗಾದಿ, ಹೋಳಿ, ಷಬ್-ಎ-ಬರಾತ್, ಗುಡ್‍ಫ್ರೈಡೇ, ಜಾತ್ರೆ, ಸಮಾಜ ಸುಧಾರಕರು ಹಾಗೂ ಗಣ್ಯರ ಜಯಂತಿಗಳು ಸೇರಿದಂತೆ ವಿವಿಧ ಹಬ್ಬಗಳಲ್ಲಿ ಹೆಚ್ಚಿನ ಜನ ಸೇರಿ ಗುಂಪುಗೂಡಲು ಮತ್ತು ಸಾರ್ವಜನಿಕ ಸಭೆ ನಡೆಸಲು ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಸರ್ಕಾರದ ಸಾಂಕ್ರಾಮಿಕ ರೋಗಗಳ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.