ಜಿಲ್ಲೆ

ಮದುವೆ ಊಟ ಸವಿದ ಜನರಿಗೆ ವಾಂತಿ-ಭೇದಿ

ಚಿಕ್ಕೋಡಿ: ಮದುವೆ ಸಮಾರಂಭದಲ್ಲಿ ಕಲುಷಿತ ಆಹಾರ ಸೇವಿಸಿದ ನೂರಕ್ಕೂ ಹೆಚ್ಚು ಜನರು ವಾಂತಿ-ಭೇದಿಯಾಗಿ ತೀವ್ರ ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನಡೆದಿದೆ.

ಅಸ್ವಸ್ಥಗೊಂಡಿರುವರಲ್ಲಿ 52 ಮಂದಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 16 ಜನ ಖಾಸಗಿ ಆಸ್ಪತ್ರೆಯಲ್ಲಿ, ಉಳಿದವರು ಮಹಾರಾಷ್ಟ್ರದ ಮಿರಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಾಯ್ತು?: ಸೋಮವಾರ ಹಿರೇಕೋಡಿ ಗ್ರಾಮದ ಕುಟುಂಬವೊಂದರ ಮದುವೆ ಸಮಾರಂಭ ಇತ್ತು. ಸಸ್ಯಾಹಾರ, ಮಾಂಸಾಹಾರ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಾಂಸಾಹಾರ ಸೇವಿಸಿದ ನೂರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ರೈಸ್ ಮತ್ತು ಚಿಕನ್ ಸೇವಿಸಿದ ನೂರಕ್ಕೂ ಹೆಚ್ಚು ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ.

ಮದುವೆ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದಂತೆ ಈ ಸಮಸ್ಯೆ ಕಾಣಿಸಿಕೊಂಡು ತಡರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಿರೇಕೋಡಿ ಗ್ರಾಮದ ಶಾಲೆಯಲ್ಲೇ ಠಿಕಾಣಿ ಹೂಡಿ ಚಿಕಿತ್ಸೆ ನೀಡುತ್ತಿದ್ದಾರೆ. ತೀವ್ರ ಅಸ್ವಸ್ಥಗೊಂಡವರನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗುಣಮುಖರಾಗುತ್ತಿದ್ದಾರೆ. ಕೆಲವರು ಹೊಟ್ಟೆ ನೋವು ಇದೆ ಎಂದು ಅಪ್ಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಗಡೇದ ತಿಳಿಸಿದ್ದಾರೆ.

ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿ: ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಗಣೇಶ ಹುಕ್ಕೇರಿ ರೋಗಿಗಳ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ರೋಗಿಗಳಿಗೆ ಹೆಚ್ಚಿನ ಬೆಡ್ ವ್ಯವಸ್ಥೆ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಹರ್ಷಲ್ ಭೋಯರ್ ಮಾತನಾಡಿ, ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಬೆಳಗಾವಿಗೆ ಕಳುಹಿಸಿಕೊಡುವಂತೆ ಅಪ್ಪರ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು. ಉಪವಿಭಾಗಾಧಿಕಾರಿ ಮಾಧವ ಗಿತ್ತೆ, ತಹಸೀಲ್ದಾರ್ ಚಿದಂಬರ ಇದ್ದರು.