ಜಿಲ್ಲೆ

ಮದುವೆಯಾವುದಾಗಿ ನಂಬಿಸಿ ಯುವತಿಗೆ ಮೋಸ; ಐವರ ವಿರುದ್ಧ ಎಫ್‌ಐಆರ್

ರಟ್ಟಿಹಳ್ಳಿ: ಯುವತಿಯೊಬ್ಬಳನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಆಕೆಯನ್ನು ಕರೆದುಕೊಂಡು ಹೋಗಿ ಆಕೆಯ ಸ್ನೇಹಿತೆಯ ಮನೆಯಲ್ಲಿ ಬಿಟ್ಟು ಬಂದು ಈಗ ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿ ಐವರ ವಿರುದ್ಧ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಸಲ್ಮಾನ್ ಮೋಹಿಬ್ ಸೈಕಲಗಾರ, ಅರಶಿಯಾ ಮೋಹಿಬ್ ಸೈಕಲಗಾರ, ಅಂಜುಮ ಸೈಕಲಗಾರ, ಮೋಹಿಬ್ ಗನಿಸಾಬ ಸೈಕಲಗಾರ ಹಾಗೂ ಜಬೀ ಗನಿಸಾಬ ಸೈಕಲಗಾರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಇವರ ವಿರುದ್ಧ ದೂರು ನೀಡಿರುವ ನೊಂದ ಯುವತಿ, ಮನೆಯಲ್ಲಿ ನನಗೆ ಬೇರೆ ಹುಡುಗನೊಂದಿಗೆ ನಿಶ್ಚಿತಾರ್ಥ ಫಿಕ್ಸ್ ಮಾಡಿದ್ದರು. ಇದನ್ನು ತಿಳಿದ ಸಲ್ಮಾನ್ ನಾನೇ ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ. ಮನೆಯಿಂದ ಹೊರ ಬಾ ಎಂದು ಕರೆದುಕೊಂಡು ಹೋಗಿ ನನ್ನ ಸ್ನೇಹಿತೆಯ ಮನೆಯಲ್ಲಿ ಬಿಟ್ಟು ಹೋಗಿದ್ದ. ಆದರೀಗ ನನ್ನನ್ನು ಮದುವೆ ಆಗುವುದಿಲ್ಲ ಎನ್ನುತ್ತಿದ್ದಾನೆ.
ಇದನ್ನು ಅವರ ಮನೆಯವರಿಗೆ ಹೇಳಲು ಹೋದಾಗ ಆತನ ಕುಟುಂಬದವರು ನನಗೆ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.