ಬಾಗಕೋಟೆ: ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸಿರುವ ಕರೊನಾ ವೈರಸ್ ಮಾಡುತ್ತಿರುವ ಆವಾಂತರಗಳು ಅಷ್ಟಿಷ್ಟಲ್ಲ. ಯಾವಾಗ, ಹೇಗೆ, ಯಾವ ರೂಪದಲ್ಲಿ ಈ ವೈರಸ್ ಮನುಷ್ಯನ ದೇಹವನ್ನು ಹೊಕ್ಕುತ್ತಿದೆಯೋ ತಿಳಿಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸಮುದಾಯ ಮಟ್ಟದಲ್ಲಿಯೂ ವೈರಸ್ ಹರಡುವ ಭೀತಿ ಇನ್ನೊಂದೆಡೆ.
ಇಲ್ಲಿಯವರೆಗೆ ಪರಿಸ್ಥಿತಿಗಳನ್ನು ಅವಲೋಕಿಸಿದಾಗ, ಮದುವೆ-ಮುಂಜಿ, ಹುಟ್ಟುಹಬ್ಬದಂಥ ಸಮಾರಂಭಗಳಿಗೆ ಹೋದವರಲ್ಲಿಯೇ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ, ಸದ್ಯ ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ಸಾರ್ವಜನಿಕ ಮದುವೆಗಳನ್ನು ಸಂಪೂರ್ಣ ಬ್ಯಾನ್ ಮಾಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಭಾಗವಹಿಸಿದ ಜನರಿಗೆ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಸೇರುವ ಮದುವೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಅವರು, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಮದುವೆಯಾಗಬಯಸಿದರೆ ಅಂಥವರು ಉಪನೊಂದಣಾಧಿಕಾರಿಗಳ ಕಚೇರಿಗಳಲ್ಲಿ ಮದುವೆಯನ್ನು ಮಾಡಿಕೊಂಡು ಹೋಗಲು ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಈ ರೀತಿ ಇದೆ:
ಕರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ನಿಯಂತ್ರಣಕ್ಕೆ ಬಾರದಿರುವುದು ಆತಂಕಕಾರಿ ಸಂಗತಿಯಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುತ್ತಿದ್ದಾರೆ. ಇದರ ಪರಿಣಾಮದಿಂದ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೂ ಸೋಂಕು ಹರಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ಕಾರಣಕ್ಕಾಗಿ ಜಿಲ್ಲೆಯಲ್ಲಿ ಇನ್ನೂ ಮುಂದೆ ಜನ ಸೇರಿಸಿ ಮದುವೆ ಸಮಾರಂಭಗಳನ್ನು ಆಚರಿಸಲು ಅನುಮತಿ ನೀಡಬಾರದು. ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಕಾರ್ಯಗಳನ್ನು ನಡೆಸಲು ಪರವಾನಿಗೆ ನೀಡುವಂತೆ ಸೂಚಿಸಿದೆ.
ಇದು ಸದ್ಯ ಎರಡು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದು, ಬೇರೆ ಜಿಲ್ಲೆಗಳಿಗೂ ಬಂದರೆ ಅಚ್ಚರಿಯಿಲ್ಲ.