ಚನ್ನರಾಯಪಟ್ಟಣದ ಜ್ಞಾನಸಾಗರ ಇಂಟರ್‌ನ್ಯಾಷನಲ್ ಶಾಲೆಯ ಜ್ಞಾನಸಾಗರ ಪರಂಪರ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೆಕಳ ಹಾಜಬ್ಬ ಅವರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು. 
ಜಿಲ್ಲೆ

ಶಿಕ್ಷಣಕ್ಕೆ ಅಂಕ ಗಳಿಕೆಯೇ ಮಾನದಂಡವಲ್ಲ

ನಾಗೇಶ ಎಸ್


ಚನ್ನರಾಯಪಟ್ಟಣ: ಶಿಕ್ಷಣ ಎನ್ನುವುದು ಕೇವಲ ಅಂಕ ಗಳಿಕೆಯೇ ಮಾನದಂಡವಲ್ಲ, ಶೈಕ್ಷಣಿಕವಾಗಿ ರ‌್ಯಾಂಕ್ ಪಡೆದ ಆದೆಷ್ಟೂ ವಿದ್ಯಾರ್ಥಿಗಳು ಜೀವನದಲ್ಲಿ ಸಾಕಷ್ಟು ಬಾರಿ ವಿಫಲರಾದ ನಿದರ್ಶನಗಳಿವೆ ಎಂದು ನಾಗೇಶ್ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಕೆ.ನಾಗೇಶ್ ತಿಳಿಸಿದರು.

ಪಟ್ಟಣದಲ್ಲಿ ನಾಗೇಶ್ ಎಜುಕೇಷನ್ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಜ್ಞಾನಸಾಗರ ಪರಂಪರ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣವನ್ನು ಮಕ್ಕಳ ಹೃದಯಕ್ಕೆ ತುಂಬದೆ ಮಿದುಳಿಗೆ ಮಾಹಿತಿ ತುಂಬುವ ಶಿಕ್ಷಣವನ್ನಾಗಿಸಲಾಗಿದೆ. ಇದರಿಂದ ಮಕ್ಕಳಲ್ಲಿ ಸ್ವಂತಿಕೆ, ಸೃಜನಶೀಲತೆ ಇಲ್ಲದಂತಾಗಿದೆ ಎಂದರು.

ಕೊಠಡಿಗಳಲ್ಲಿ ಬೋಧಿಸುವ ಪಾಠದ ಜತೆಗೆ ಕಲೆ, ಕ್ರೀಡೆ, ಸಂಸ್ಕಾರ, ಸಂಸ್ಕೃತಿ, ನಾಡಹಬ್ಬ ಸೇರಿ ಸರ್ವತೋಮುಖ ಬೆಳವಣಿಗೆಗೆ ಮುಂದಾಗಿಬೇಕು. ಯಾವ ಶಿಕ್ಷಣ ಸಂಸ್ಥೆ ಅಂಕಗಳ ಜತೆಗೆ ಕ್ರಿಯಾಶೀಲ, ಕ್ರೀಡಾಶೀಲ, ಸಾಹಿತ್ಯ, ದೇಶಾಭಿಮಾನದ ಬಗ್ಗೆ ಆಸಕ್ತಿ ಮೂಡಿಸುವುದೋ ಆ ಸಂಸ್ಥೆ ದೇಶದ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆ ನೀಡಿದಂತೆ. ಪಾಲಕರು ಮಗುವಿನ ಕಲಿಕೆಯಲ್ಲಿ ಅಂಕಗಳನ್ನಷ್ಟೆ ನೋಡದೆ, ದೇಶದ ಪರಂಪರೆ ಬಗ್ಗೆ ಎಷ್ಟು ತಿಳಿದಿದ್ದಾರೆ ಎಂದು ಅರಿತಾಗ ಶಿಕ್ಷಣಕ್ಕೆ ಸಾರ್ಥಕತೆ ಸಿಗುತ್ತದೆ. ಎಲ್ಲಿ ಸಾಹಿತ್ಯ, ಸಾಂಸ್ಕೃತಿಕತೆ ಇರುವುದಿಲ್ಲವೂ ಅಲ್ಲಿ ಹೊಡೆದಾಟ, ಬಡಿದಾಟ, ಭಯೋತ್ಪಾದನೆ ಸೃಷ್ಟಿಗೆ ಕಾರಣವಾಗುತ್ತದೆ. ಆದ್ದರಿಂದ ಮಕ್ಕಳನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಪದ್ಮಶ್ರೀ ಪುರಸ್ಕೃತ ಹರೆಕಾಳ ಹಾಜಬ್ಬ ಮಾತನಾಡಿ, ನಾನೊಬ್ಬ ಬಡವ, ತಲೆಮೇಲೆ ಕಿತ್ತಳೆ ಹಣ್ಣು ಹೊತ್ತು, ಜೀವನ ನಡೆಸುವ ನಾನು. ನನ್ನೂರಿನ ಸರ್ಕಾರಿ ಶಾಲೆಗೆ ನೆರವಾಗಿದ್ದನ್ನು ಸ್ಮರಿಸಿ, ದೇಶ, ಸಮಾಜ, ಶಿಕ್ಷಣ ಸಂಸ್ಥೆಗಳು ಅಭಿನಂದಿಸುತ್ತಿರುವುದು ಎಂದಿಗೂ ಮರೆಯಲಾಗದು. ಸರ್ಕಾರಿ ಶಾಲೆ ಕಟ್ಟಲು 1.33 ಎಕರೆ ಜಾಗ ನೀಡಿ, ಬೇರೆಡೆಗೆ ಹೋಗುವ ಶಾಲೆಯನ್ನು ನನ್ನೂರಿನ ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಟ್ಟಿದ್ದನ್ನು ನಾಡು, ದೇಶ ಅಭಿನಂದಿಸಿದೆ. ದೇಶದ ಪ್ರಧಾನಿ, ರಾಷ್ಟ್ರಪತಿಗಳಿಂದ ಗೌರವ ಸಿಕ್ಕಿದೆ. ಅವರು ನೀಡಿದ 50 ಲಕ್ಷ ರೂ.ಗಳನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದೇನೆ ಎಂದು ಹೇಳಿದರು.

2016ರಲ್ಲಿ ಕಿತ್ತಳೆ ಹಣ್ಣಿನ ಬುಟ್ಟಿಯಲ್ಲಿ ಅರಳಿದ ಅಕ್ಷರಮಾಲೆ ಎಂಬ ಲೇಖನದಿಂದ ನಾಡು ನನ್ನನ್ನು ಗುರ್ತಿಸುವಂತಾಯಿತು. ಈಗಲೂ ಬಡವನಾಗಿರುವ ನನ್ನನ್ನು ಕುರಿತು ಬಿಕಾಂನಲ್ಲಿ ಪಠ್ಯವಿದೆ. ಇಂತಹ ದೊಡ್ಡ ಶಿಕ್ಷಣ ಸಂಸ್ಥೆ ನನ್ನನ್ನು ಅಭಿನಂದಿಸಿರುವುದಕ್ಕೆ ಋಣಿ ಎಂದರು.

ಕೇಂದ್ರ ಶಿಕ್ಷಣ ಮಂಡಳಿ ಕಾರ್ಯದರ್ಶಿ ಜಂಗಮ ಸುನೀಲ್‌ಕುಮಾರ್ ಮಾತನಾಡಿ, ನನ್ನ ವೃತ್ತಿ ಬದುಕಿನಲ್ಲಿ ಕರ್ನಾಟಕ ಸೇರಿ ಇತರ ರಾಜ್ಯಗಳ ಸಾವಿರಾರು ಶಾಲೆಗಳನ್ನು ನೋಡಿದ್ದೇನೆ. ಆದರೆ ಇಲ್ಲಿಯ ಶಾಲೆಯಲ್ಲಿ ವಿಶೇಷತೆ ಇದೆ, ಮೂಲ ಸೌಲಭ್ಯಕ್ಕೆ ಕೊರತೆ ಇಲ್ಲದೆ ದೊಡ್ಡ ನಗರಗಳ ಶಾಲೆಗಳಿಗೆ ಸರಿಸಮನಾಗಿ ಶಿಕ್ಷಣ ಮತ್ತು ಶಿಕ್ಷಣೇತರ ಬೋಧನೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ಸಂಸ್ಥೆ ಮುಖ್ಯ ಕಾರ್ಯಕಾರಿ ನಿರ್ದೇಶಕಿ ಡಾ.ಭಾರತಿ ನಾಗೇಶ್, ಡೀನ್ ಡಾ.ಸುಜಾ ಫಿಲಿಪ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಟಿ.ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ಇತರರು ಇದ್ದರು.