ಜಿಲ್ಲೆ

ಅಧಿಕಾರಿಗಳಿಂದ ಮಾರ್ಕಿಂಗ್​

ಗೌರಿಬಿದನೂರು ರಸ್ತೆ ಬದಿ ವರ್ತಕರಲ್ಲಿ ಹೆಚ್ಚಿದ ಆತಂಕ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ನಗರದ ಮೂಲಕ ಶಿರಾದಿಂದ ಮುಳಬಾಗಿಲವರೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ 234 (ಎಂ.ಜಿ) ರಸ್ತೆ ವಿಸ್ತರಣೆಗೆ ಅಧಿಕಾರಿಗಳು ನಗರದಲ್ಲಿ ಜಾಗ ಗುರುತಿಸಿ, ಮಾರ್ಕಿಂಗ್​ ಮಾಡಿದರು.

ಎಇಇ ರಾಜರೆಡ್ಡಿ, ಅಭಿಯಂತ ಶಿವಣ್ಣ, ಲೋಕೋಪಯೋಗಿ ಇಲಾಖೆ ಅಧಿಕಾರಿ ಒಳಗೊಂಡ ತಂಡ ನಗರ ವ್ಯಾಪ್ತಿಯ ರಸ್ತೆಗೆ ಮಾರ್ಕ್​ ಮಾಡಿತು. ಮೊದಲ ಹಂತವಾಗಿ ನಗರದ ಮಧುಗಿರಿ ರೈಲ್ವೆ ಮೇಲ್​ ಸೇತುವೆಯಿಂದ ನಾಗಯ್ಯ ರೆಡ್ಡಿ ವೃತದವರೆಗೂ ಮಾರ್ಕ್​ ಮಾಡಲಾಯಿತು. ರಸ್ತೆ ಮಧ್ಯಭಾಗದಿಂದ 2 ಕಡೆ 40 ಅಡಿ ವಿಸ್ತರಣೆ ಮಾಡಲಾಗುವುದು. ಲೋಕೋಪಯೋಗಿ ಇಲಾಖೆ ನೀಡಿರುವ ದಾಖಲೆಗಳ ಅನುಸಾರ ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಸೂಕ್ತ ಪರಿಹಾರ ಒದಗಿಸದೆ ರಸ್ತೆ ವಿಸ್ತರಣೆಗೆ ಅವಕಾಶ ನೀಡಬಾರದು ಎಂದು ರಸ್ತೆ ಬದಿಯ ಕೆಲವು ಮಾಲೀಕರು ವರ್ಷಗಳ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.