ಜಿಲ್ಲೆ

ಭೂಕುಸಿತ ಭೀತಿ.. ಜಮೀನು ಮಾರಾಟಕ್ಕೆ ತಯಾರಿ

ಸುಭಾಸ ಹೆಗಡೆ ಧೂಪದಹೊಂಡ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡದ ಮೇಲಿನ ಬದುಕಿನ ಜತೆಗೆ ಗುಡ್ಡದ ತಪ್ಪಲಿನ ಜಮೀನುಗಳಿಗೆ ಭದ್ರತೆಯಿಲ್ಲದ ಕಾರಣಕ್ಕೆ ಹತ್ತಾರು ಭೂ ಮಾಲೀಕರು ತಮ್ಮ ಜಮೀನು ಮಾರಾಟ ಮಾಡಿ, ಬೇರೆಡೆ ಹೋಗಲು ಮುಂದಾಗುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭೂಕುಸಿತದಂಥ ಪ್ರಕರಣಗಳು ವರ್ಷಗಳಿಂದ ಸಂಭವಿಸುತ್ತಿವೆ. ಕಡವಾಡ, ತಂಡ್ರಕುಳಿಯಂಥ ಭೂಕುಸಿತದ ವೇಳೆ ಪ್ರಾಣ ಹಾನಿ ಸಂಭವಿಸಿತ್ತು. ಇತ್ತೀಚೆಗೆ ಅತಿವೃಷ್ಟಿಯ ಕಾರಣಕ್ಕೆ ಯಲ್ಲಾಪುರದ ಕಳಚೆಯಲ್ಲಿ ಭಾರಿ ಭೂಕುಸಿತ ಉಂಟಾಗಿ ಮನೆಗಳು ನಾಶವಾಗುವ ಜತೆಗೆ ರೈತರ ಜೀವನಾಡಿಯಾಗಿದ್ದ ಕೃಷಿ ಜಮೀನುಗಳು ಕೊಚ್ಚಿ ಹೋಗಿದ್ದವು. ಶಿರಸಿಯ ಮತ್ತಿಘಟ್ಟದಲ್ಲಿ ಭೂ ಕುಸಿತದಿಂದ ಇಬ್ಬರು ರೈತರ ಸಂಪೂರ್ಣ ಅಡಕೆ ತೋಟ ಮಣ್ಣಿನಡಿಯಾಗಿತ್ತು. ಜಾಜಿಗುಡ್ಡೆಯಲ್ಲಿ ಇನ್ನೂ ಆತಂಕವಿದ್ದು, ಗುಡ್ಡದ ತಪ್ಪಲಿನಲ್ಲಿ ವಾಸಿಸುವ ಅನಿವಾರ್ಯತೆಯಲ್ಲಿ ಅಲ್ಲಿನವರಿದ್ದಾರೆ. ಭೂಕುಸಿತದ ಹಲವು ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಉಡಲು ಬಟ್ಟೆಯಿಲ್ಲದೆ, ಸೇವಿಸಲು ಆಹಾರವಿಲ್ಲದೆ ನರಳಿದ್ದನ್ನು ಕಂಡು ಬೆಚ್ಚಿರುವ ಭೂಕುಸಿತ ಪ್ರದೇಶಗಳ ಸುತ್ತಮುತ್ತಲ ನಿವಾಸಿಗಳು ತಮ್ಮ ಜಮೀನು ಮಾರುವ ತವಕ ತೋರುತ್ತಿದ್ದಾರೆ.
ಗುಡ್ಡದ ತಪ್ಪಲ ಜಮೀನು: ಎಲ್ಲಿ ಭೂಕುಸಿತವಾಗಿದೆಯೋ ಅಲ್ಲೆಲ್ಲ ಬಹುತೇಕ ತೋಟ, ಗದ್ದೆಗಳು ಇದ್ದು, ಅದು ಗುಡ್ಡದ ತಪ್ಪಲಿನ ಪ್ರದೇಶವಾಗಿದೆ. ಕೆಲವೆಡೆ ಸಂಪೂರ್ಣ ನಾಶವಾದರೆ ಇನ್ನೂ ಹಲವೆಡೆ ಕೆಲವೇ ಪ್ರಮಾಣದಲ್ಲಿ ಜಮೀನುಗಳಿಗೆ ಧಕ್ಕೆಯಾಗಿದೆ. ಘಟನೆಯಿಂದ ಆತಂಕಕ್ಕೆ ಒಳಗಾದವರ ಜಮೀನು ಇರುವುದು ಕೂಡ ಇದೇ ಗುಡ್ಡಗಳ ತಪ್ಪಿಲಿನಲ್ಲಾಗಿದೆ. ಈಗಾಗಲೇ ನೂರಾರು ಎಕರೆ ಕೃಷಿ ಜಮೀನು ನಾಶವಾಗಿದ್ದು, ಮುಂಬರುವ ದಿನಗಳಲ್ಲಿ ಭೂಕುಸಿತದಂಥ ಘಟನೆ ಮರುಕಳಿಸಿದರೆ ತಮ್ಮ ಜಮೀನಿಗೆಲ್ಲಿ ಆಪತ್ತು ಬರುತ್ತದೆಯೋ ಎಂದು ಆತಂಕದಿಂದ ಜಮೀನು ಮಾರಾಟ ಮಾಡುವ ನಿರ್ಧಾರಕ್ಕೆ ಬಹುತೇಕರು ಬಂದಿದ್ದಾರೆ.
ಮಾರುಕಟ್ಟೆ ದರಕ್ಕಿಂತ ಕಡಿಮೆ: ಈಗಾಗಲೇ ಯಲ್ಲಾಪುರ ಕಳಚೆ, ಬೀಸಗೋಡ, ದೇವಿಮನೆಕೇರಿ, ಶಿರಸಿಯ ಮತ್ತಿಘಟ್ಟ, ಕಲ್ಲಗದ್ದೆ, ಕಲ್ಲಳ್ಳಿ, ಎಮ್ಮೆಗುಂಡಿ, ಚಿಂಚಳಿಕೆ ಸೇರಿ ಭೂಕುಸಿತ ಸಂಭವಿಸಿರುವ ಗ್ರಾಮಗಳ ಸುತ್ತಮುತ್ತಲ ಭಾಗದ 15ಕ್ಕೂ ಹೆಚ್ಚು ಭೂಮಾಲೀಕರು ತಮ್ಮ 50 ಎಕರೆಗೂ ಹೆಚ್ಚಿನ ಜಮೀನು ಮಾರುವುದನ್ನು ಖಾತ್ರಿಪಡಿಸಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜಮೀನು ಮಾರುವ ಮಾತುಕತೆ ನಡೆಸುವ, ಮಾರುವ ಪ್ರಯತ್ನವನ್ನೂ ನಡೆಸಿದ್ದಾರೆ. ಭೂಕುಸಿತದ ಆತಂಕದಲ್ಲಿರುವ ಕೃಷಿ ಭೂಮಿ ಮಾಲೀಕರು ತಮ್ಮ ಸಮೃದ್ಧ ಕೃಷಿ ಭೂಮಿಯನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ನೀಡುವ ಬೇಡಿಕೆ ಇಡುತ್ತಿರುವುದು ಅವರಲ್ಲಿನ ಆತಂಕಕ್ಕೆ ಸಾಕ್ಷಿಯಾಗಿದೆ. ದರ ಕಡಿಮೆಯಾದರೂ ಸರಿ, ಒಮ್ಮೆ ಮಾರಿದರೆ ಜೀವ ಭಯದಲ್ಲಿ ಜೀವನ ಕಳೆಯುವ ಸಂಕಟ ತಪ್ಪುತ್ತದೆ ಎಂಬುದು ಅವರ ಮಾತಾಗಿದೆ.

ವೈಜ್ಞಾನಿಕ ಕಾರಣವಿಲ್ಲ
ಗುಡ್ಡದ ಒಂದು ಪಾರ್ಶ್ವದಲ್ಲಿ ಭೂಕುಸಿತವಾದರೆ ಇನ್ನೊಂದು ಪಾರ್ಶ್ವದ ಜನರು ಜಮೀನು ಮಾರಲು ತರಾತುರಿ ಮಾಡುತ್ತಿದ್ದಾರೆ. ಇದು ಮಾನಸಿಕವಾಗಿ ಆತಂಕಕ್ಕೆ ಒಳಗಾದವರ ಲಕ್ಷಣವಾಗಿದೆ. ಭೂಕುಸಿತಕ್ಕೆ ಕಾರಣ ತಿಳಿದು ಜಮೀನು ಮಾರಿದರೆ ಉತ್ತಮ. ಇಲ್ಲವಾದರೆ ಅದನ್ನು ಖರೀದಿಸುವವರ ಮೇಲೂ ಪರಿಣಾಮವಾಗುತ್ತದೆ. ಒಂದೇ ಪ್ರದೇಶದಲ್ಲಿ ಅಥವಾ ಅದರ ಸುತ್ತಮುತ್ತಲೂ ವರ್ಷವೂ ಭೂಮಿ ಕುಸಿಯುತ್ತದೆ ಎಂಬುದಕ್ಕೆ ವೈಜ್ಞಾನಿಕ ಕಾರಣವಿಲ್ಲ ಎಂಬುದು ಪರಿಸರ ತಜ್ಞರ ಮಾತು.


ಇತ್ತೀಚಿನ ವರ್ಷಗಳಲ್ಲಿ ಭೂಕುಸಿತವಾಗಲು ಪ್ರದೇಶಗಳ ಮಿತಿಯಿಲ್ಲದಂತಾಗಿದೆ. ಯಾವ ಸಮಯದಲ್ಲಿ ಯಾವುದೇ ಪ್ರದೇಶದಲ್ಲಿ ಯಾವ ಗುಡ್ಡ ಜರಿದು ಮೈಮೇಲೆ ಬರುತ್ತದೆ ಎಂಬುದು ಗೊತ್ತಿಲ್ಲ. ಅಲ್ಲದೆ, ನಮ್ಮ ಭೂಮಿಯ ಸುತ್ತಮುತ್ತ ಇಂಥ ಘಟನೆಗಳು ನಡೆಯುತ್ತಿರುವಾಗ ಹಾಗೂ ಅದಕ್ಕೆ ಕಾರಣ ತಿಳಿಯದಿದ್ದಾಗ ಸಹಜವಾಗಿ ಆತಂಕ ಮೂಡುತ್ತದೆ. ಹುಟ್ಟಿ ಬೆಳೆದ ಭೂಮಿ ಮಾರಲು ಸಂಕಟವಾಗುತ್ತದೆ. ಆದರೆ, ಮಕ್ಕಳ ಭವಿಷ್ಯಕ್ಕಾಗಿ ಜಮೀನು ಮಾರಿ ಸುರಕ್ಷಿತ ಸ್ಥಳದತ್ತ ತೆರಳುವುದು ಅನಿವಾರ್ಯವಾಗಿದೆ.| ಹೆಸರು ಹೇಳಲಿಚ್ಛಿಸದ ಕಳಚೆ ನಿವಾಸಿಭೂಮಿ ಕುಸಿತವಾದ ಮೇಲ್ಭಾಗದ ಕಾಡುಗಳಲ್ಲಿ ಇನ್ನೂ ಬಿರುಕುಗಳು ಇವೆ. ಭೂಕುಸಿತದ ಪ್ರದೇಶಗಳ ಗುಡ್ಡಗಳ ಸಮೀಕ್ಷೆ ನಡೆಸಿ ರೈತರಿಗೆ ವಾಸ್ತವ ಸಂಗತಿ ತಿಳಿಸುವ ಕಾರ್ಯ ಆಗಬೇಕು. ಮೂಲ ಸ್ಥಳ ಬಿಡುವುದು ಆತಂಕಕಾರಿ ಸಂಗತಿಯಾಗಿದೆ. ಹೀಗಾಗಿ ಜಿಲ್ಲಾಡಳಿತ ಅಂಥ ಹಳ್ಳಿಗಳ ಜನರ ಆಂತರ್ಯ ಅರಿಯುವ ಕೆಲಸ ಮಾಡಬೇಕು. ಜತೆಗೆ ಕಳಚೆಯಲ್ಲಾದ ಭೂಕುಸಿತದ ಗಂಭೀರತೆಯನ್ನು ಕೊಡಸಳ್ಳಿ, ಕೈಗಾ, ಕದ್ರಾದವರು ಅರಿಯಬೇಕು. ಅಭಿವೃದ್ಧಿಯ ಮಾದರಿ ಮರುಪರಿಶೀಲನೆ ಮಾಡಬೇಕು.| ಶಿವಾನಂದ ಕಳವೆಪರಿಸರ ತಜ್ಞ