ಜಿಲ್ಲೆ

ಮಾರುಕಟ್ಟೆಯಲ್ಲಿ ದೈಹಿಕ ಅಂತರ ಮರೆತ ಜನ

ಬೆಳಗಾವಿ: ಮಹಾಮಾರಿ ಕರೊನಾ ವೈರಸ್ ಅರ್ಭಟದ ನಡುವೆಯೂ ಜನರು ದೈಹಿಕ ಅಂತರ ಮರೆತು ಲಕ್ಷೀ ಪೂಜೆ ಮತ್ತು ನಾಗರ ಪಂಚಮಿ ಹಬ್ಬದ ನಿಮಿತ್ತ ಶುಕವಾರ ನಗರದ ಮಾರುಕಟ್ಟೆಗಳಲ್ಲಿ ವಿವಿಧ ಸಾಮಗ್ರಿ ಖರೀದಿಸಿದರು.

ಕರೊನಾ, ಲಾಕ್‌ಡೌನ್ ನಿಯಮ ಲೆಕ್ಕಿಸದೆ ಮತ್ತು ಜಿಲ್ಲಾಡಳಿತದ ನಿಯಮ ಗಾಳಿಗೆ ತೂರಿದ ಸಾರ್ವಜನಿಕರು ನಗರ ಮತ್ತು ಜಿಲ್ಲೆಯಾದ್ಯಂತ ವಾರದಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪಂಚಮಿಯ ಹಬ್ಬವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂಗಡಿಕಾರರು ದಾಸ್ತಾನು ಮಾಡಿಕೊಂಡಿದ್ದಾರೆ. ಇನ್ನು ಬಳೆ ಅಂಗಡಿ, ಜನರಲ್ ಸ್ಟೋರ್‌ಗಳಿಗೆ ಪಂಚಮಿ ಹಬ್ಬ ಶುಕ್ರದೆಸೆಯಾಗಿ ಪರಿಣಮಿಸಿತು.

ಕಳೆದ ನಾಲ್ಕೈದು ದಿನಗಳಿಂದ ನಗರದ ಅಲ್ಲಲ್ಲಿ ಅಳ್ಳುಬಟ್ಟಿಗಳು ತಲೆ ಎತ್ತಿವೆ. ಪಂಚಮಿ ಹಬ್ಬಕ್ಕಾಗಿ ಜನ ಅಳ್ಳು, ಕಡಲೆ ಹುರಿದುಕೊಳ್ಳುವುದೇ ಇದಕ್ಕೆ ಕಾರಣ. ಶುಕ್ರವಾರ ನಗರದ ವಿವಿಧೆಡೆ ತೆರೆದ ಅಳ್ಳುಬಟ್ಟಿಗಳ ಬಳಿ ಜನ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಸರದಿ ಪ್ರಕಾರ ನಿಂತುಕೊಂಡು ಅಳ್ಳು, ಕಡಲೆಯನ್ನು ಹುರಿದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಾಗರ ಪಂಚಮಿ ನಿಮಿತ್ತ ವಾಡಿಕೆಯಂತೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರು ಮಣ್ಣಿನ ನಾಗರ ಮೂರ್ತಿಗೆ ಹಾಲು ಎರೆದು ಹಬ್ಬ ಆರಂಭಿಸುತ್ತಾರೆ. ಅದರಂತೆ ಶುಕ್ರವಾರ ನಗರದ ವಿವಿಧ ಕಡೆ ಮಣ್ಣಿನಿಂದ ತಯಾರಿಸಿದ ನಾಗರ ಮೂರ್ತಿಗಳ ಮಾರಾಟ ಜೋರಾಗಿ ನಡೆಯಿತು. ಕೆಲವು ಕಡೆ ಮನೆ ಮನೆಗಳಿಗೆ ತೆರಳಿ ವ್ಯಾಪಾರಿಗಳು ಮೂರ್ತಿಗಳನ್ನು ನೀಡುತ್ತಿರುವುದು ವಿಶೇಷವಾಗಿ ಕಂಡು ಬಂತು.

ಈ ವರ್ಷ ಕರೊನಾ ವೈರಸ್ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಗರ ಪಂಚಮಿ ಹಬ್ಬ ಆಚರಿಸುವುದನ್ನು ಕೈಬಿಡಲು ನಿರ್ಧರಿಸಲಾಗಿತ್ತು. ಆದರೆ, ಜನರು ತಮ್ಮ ಮನೆಗಳಲ್ಲಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ. ಪೂಜಾ ಸಾಮಗ್ರಿಗಳು, ಅಳ್ಳು, ಇತರ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಆಗಮಿಸಿದ್ದರು. ಆದರೆ, ಜನರು ದೈಹಿಕ ಅಂತರ ಕಾಪಾಡಿಕೊಳ್ಳದೇ ಖರೀದಿ ಮಾಡುತ್ತಿದ್ದಾರೆ ಎಂದು ಮಹಾಂತೇಶ ನಗರದ ಶಿವಪ್ಪ ಎಸ್.ಪಾಟೀಲ್ ತಿಳಿಸಿದರು.