ಬಂಗಾರಪೇಟೆ: ಪಟ್ಟಣದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಥೆಯಿಂದ ಅತ್ಯಾಧುನಿಕ ಟೊಮ್ಯಾಟೊ ಮಾರುಕಟ್ಟೆ ನಿರ್ಮಾಣ ಮಾಡಿ 6 ವರ್ಷ ಕಳೆದರೂ ಇದುವರೆಗೂ ಹರಾಜು ಪ್ರಕ್ರಿಯೆ ಆರಂಭಿಸದೆ ರೈತರಿಗಾಗಿ ಹೂಡಿರುವ ಬಂಡವಾಳ ವ್ಯರ್ಥವಾಗುತ್ತಿದೆ.
ತಾಲೂಕಿನ ರೈತರು ಟೊಮ್ಯಾಟೊ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಇಲ್ಲದೆ ಕೋಲಾರ, ಬೆಂಗಳೂರು ಅಥವಾ ಚೆನ್ನೈಗೆ ಸಾಗಿಸುತ್ತಿದ್ದಾರೆ. ಈ ಸಮಸ್ಯೆ ನಿವಾರಿಸಿ ಟೊಮ್ಯಾಟೊ ಮಾರುಕಟ್ಟೆಯನ್ನು ಬಂಗಾರಪೇಟೆಯಲ್ಲಿ ಪ್ರಾರಂಭಿಸಬೇಕು ಎಂಬುದು ರೈತರ ಬಹುದಿನದ ಒತ್ತಾಯವಾಗಿತ್ತು. ಆದರೆ ಸರ್ಕಾರ ಅಥವಾ ಎಪಿಎಂಸಿ ಆಡಳಿತ ಮಂಡಳಿ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ರೈತರ ಸತತ ಹೋರಾಟ ಮತ್ತು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಾಳಜಿ ಫಲವಾಗಿ 2014ರಲ್ಲಿ ಅತ್ಯಾಧುನಿಕ ಟೊಮ್ಯಾಟೊ ಮಾರುಕಟ್ಟೆ ಆರಂಭಿಸಿ ಉದ್ಘಾಟನೆಗೊಂಡಿತ್ತು.
ಟೊಮ್ಯಾಟೊ ದಾಸ್ತಾನಿಗೆ ವರ್ತಕರಿಗೆ 100ಕ್ಕೂ ಹೆಚ್ಚಿನ ನಿವೇಶನ ನೀಡಿ ಮಳಿಗೆ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿತ್ತು. ಆದರೆ ವರ್ತಕರು ಮಳಿಗೆ ನಿರ್ಮಾಣದ ಜತೆ ಎಪಿಎಂಸಿ ಮಾರುಕಟ್ಟೆಗೆ ವಿರುದ್ಧವಾಗಿ ವಸತಿ ಗೃಹ ನಿರ್ಮಾಣ ಮಾಡಿ ಇಲಾಖೆ ಕೆಂಗಣ್ಣಿಗೆ ಗುರಿಯಾದರು. ವಸತಿ ಗೃಹ ನಿರ್ಮಾಣ ಮಾಡಿದ್ದಕ್ಕೆ ಇಲಾಖೆಯಿಂದ ವರ್ತಕರಿಗೆ ನೋಟಿಸ್ ನೀಡಿದ್ದರು. ಇನ್ನೇನು ತಾಲೂಕಿನ ಟೊಮ್ಯಾಟೊ ಬೆಳೆಗಾರರಿಗೆ ನಮ್ಮೂರಲ್ಲೇ ಮಾರುಕಟ್ಟೆ ಆರಂಭವಾಗಿದೆ ಎಂಬ ಖುಷಿಯಲ್ಲಿದ್ದರು. ಆದರೆ ಈ ಖುಷಿ ಹೆಚ್ಚುದಿನ ಉಳಿಯಲಿಲ್ಲ. ಮಾರುಕಟ್ಟೆ ಆರಂಭವಾಗಿ 6 ವರ್ಷಗಳಾದರೂ ಟೊಮ್ಯಾಟೊ ಹರಾಜು ಪ್ರಕ್ರಿಯೆ ನಡೆಯದೆ ರೈತರು ಹತಾಶರಾಗಿದ್ದಾರೆ.
ಸರ್ಕಾರದ ಹಣ ವ್ಯರ್ಥ: ಬರಿ ತರಕಾರಿ ಹರಾಜು ಮಾತ್ರ ನಿತ್ಯ ಸಾಗಿದೆ. ಟೊಮ್ಯಾಟೊ ಬೆಳೆಗಾರರು ದೂರದ ನಗರಗಳಿಗೆ ಅಲೆಯುವ ಪರಿಸ್ಥಿತಿ ಮಾತ್ರ ತಪ್ಪಿಲ್ಲ, ಪಟ್ಟಣದಲ್ಲೇ ಟೊಮ್ಯಾಟೊ ಹರಾಜು ನಡೆಸಲು ದಲ್ಲಾಳಿಗಳ್ಯಾರೂ ಮುಖ ಮಾಡದ ಕಾರಣ ಒಂದು ಕಡೆ ರೈತರಿಗೆ ಅನನುಕೂಲವಾದರೆ ಮತ್ತೊಂದೆಡೆ ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಮಾರುಕಟ್ಟೆ ಬಳಕೆಗೆ ಬಾರದೆ ಸರ್ಕಾರದ ಹಣ ವ್ಯರ್ಥವಾಗಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ರಾತ್ರಿ ಕುಡುಕರ ಹಾವಳಿ ಹೆಚ್ಚಾಗಿದೆ. ಎಪಿಎಂಸಿ ಆಡಳಿತ ಮಂಡಳಿ ಇತ್ತ ಗಮನಹರಿಸಿ ಮಾರುಕಟ್ಟೆ ಆರಂಭಿಸಬೇಕೆಂಬುದು ರೈತರ ಒತ್ತಾಯವಾಗಿದೆ.
ನೂತನ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಹರಾಜು ಹಾಕಲು ದಲ್ಲಾಳಿಗಳ ಕೊರತೆ ಇದೆ. ಕೋಲಾರದಿಂದ ದಲ್ಲಾಳಿಗಳನ್ನು ಇತ್ತ ಆಕರ್ಷಿಸಲು ಸತತ ಪ್ರಯತ್ನ ನಡೆಯುತ್ತಿದೆ. ದಲ್ಲಾಳಿಗಳು ಬಂದರೆ ನಾಳೆಯೇ ಟೊಮ್ಯಾಟೊ ಹರಾಜು ಪ್ರಕ್ರಿಯೆ ನಡೆಸಲು ಎಪಿಎಂಸಿ ಸಿದ್ಧ. ವಿಜಯರಾಘವರೆಡ್ಡಿ, ಎಪಿಎಂಸಿ ಅಧ್ಯಕ್ಷ