ಮಂಡ್ಯ: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವರ್ತಕರ ಮಾರುಕಟ್ಟೆ ಮಳಿಗೆಯನ್ನು ಹಲವು ವರ್ಷದಿಂದ ಶ್ರಮ ವಹಿಸಿ ವ್ಯಾಪಾರ ಮಾಡಿಕೊಂಡು ಬರುತ್ತಿರುವಂತಹ ವರ್ತಕರಿಗೆ ಹಂಚಲಾಗುವುದು. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಪೇಟೆಬೀದಿಯಲ್ಲಿ ನಗರಸಭೆಯಿಂದ ನಿರ್ಮಿಸಲಾಗಿರುವ ಜಯಚಾಮರಾಜೇಂದ್ರ ಒಡೆಯರ್ ಮಾರುಕಟ್ಟೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನರ ಆಶೀರ್ವಾದದಿಂದ ಕೇಂದ್ರ ಮಂತ್ರಿಯಾಗಿದ್ದೇನೆ. ಅಂದಿನ ಇಲ್ಲಿಯವರೆಗೂ ಜಿಲ್ಲಾಧಿಕಾರಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಜಿಲ್ಲೆಯಲ್ಲಿ ಕಾರ್ಖಾನೆ ನಿರ್ಮಾಣ ಮಾಡಲು ಸೂಕ್ತ ಜಾಗ ಗುರುತಿಸಲು ಡಿಸಿಗೆ ನಿರ್ದೇಶನ ನೀಡಿದ್ದೇನೆ ಎಂದರು.
ಮಂಡ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸ್ಥಳದ ಸಮಸ್ಯೆ ಇದೆ. ಕಾರ್ಖಾನೆ ನಿರ್ಮಾಣ ಮಾಡಲು ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ರಾಜ್ಯಸರ್ಕಾರದ ಮೇಲಿದೆ. ಹಿಂದೆಯಲ್ಲ ಕೈಗಾರಿಕಾ ಸಂಸ್ಥೆಗಳಿಂದ ಜನರ ಆರ್ಥಿಕ ಸುಧಾರಣೆ ಸಾಧ್ಯವಾಗುತ್ತಿತ್ತು. ಆದರೆ ಪ್ರಸ್ತುತ ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ವ್ಯಾಪ್ತಿಯಲ್ಲೇ ಸುಮಾರು 47 ಬೃಹತ್ ಕೈಗಾರಿಕೆಗಳು ಇವೆ. ಆದರೆ ಲಾಭದಲ್ಲಿ ನಡೆಯುತ್ತಿರುವುದು ಬಿಎಚ್‌ಇಎಲ್ ಸಂಸ್ಥೆ ಮಾತ್ರ. ಈ ಹಿನ್ನೆಲೆಯಲ್ಲಿ ಎಚ್‌ಎಂಟಿ ಸಂಸ್ಥೆಯನ್ನು ಪ್ರಾರಂಭ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಪೂನಾ, ಬಾಂಬೆ ನಗರಗಳಲ್ಲಿ ಅನೇಕ ಕೈಗಾರಿಕೆಗಳು ತಲೆ ಎತ್ತಿವೆ. ಅಂತಹಾ ಕಡೆ ಕೆಲಸ ನೀಡಲು ನಾವು ಸಿದ್ಧರಿದ್ದೇವೆ. ಆದರೆ ಜಿಲ್ಲೆಯ ಯುವಕರು ಸ್ಥಳೀಯವಾಗಿ ಕೆಲಸ ಕೇಳುತ್ತಿದ್ದಾರೆ. ಜಿಲ್ಲೆಯಲ್ಲಿ ನಿರುದ್ಯೋಗ ಹೆಚ್ಚಾಗಲು ಇದೆ ಕಾರಣ. ಭದ್ರಾವತಿಯಲ್ಲಿ ಸರ್‌ಎಂ. ವಿಶ್ವೇಶ್ವರಯ್ಯ ಅವರು ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಲಾಗಿದ್ದ ಉಕ್ಕು ಕಾರ್ಖಾನೆ ಸ್ಥಗಿತಗೊಂಡಿದೆ. ಇನ್ನೂ 3 ರಿಂದ ನಾಲ್ಕು ತಿಂಗಳಲ್ಲಿ ಭದ್ರಾವತಿ ಉಕ್ಕಿನ ಕಾರ್ಖಾನೆ ಪ್ರಾರಂಭ ಮಾಡಲಿದ್ದೇವೆ. ಇದರಿಂದ 8 ರಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ನಗರದ ಮಾರುಕಟ್ಟೆಯನ್ನು ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು 1951ರಲ್ಲಿ ಶಂಕುಸ್ಥಾಪನೆ ಮಾಡಿದ್ದಾರೆ. 1960ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಡಿ ಜಡ್ತಿ ಅವರಿಂದ ಉದ್ಘಾಟನೆ ಆಗಿದೆ. ಈ ಮಾರುಕಟ್ಟೆ ಹಳೆಯ ಮತ್ತು ದೊಡ್ಡ ಮಾರುಕಟ್ಟೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಇದೀಗ ಅಂದಾಜು 10.21 ಕೋಟಿ ರೂ ಅನುದಾನದಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್, ಪೌರಾಯುಕ್ತೆ ಪಂಪಾಶ್ರೀ, ಮುಡಾ ಅಧ್ಯಕ್ಷ ನಯೀಂ ಇತರರಿದ್ದರು.
ಕೇಂದ್ರ ಸಚಿವರಿಗೆ ಶಾಸಕ ರವಿಕುಮಾರ್ ಕೌಂಟರ್
ಮಾರುಕಟ್ಟೆ ಲೋಕಾರ್ಪಣೆ ಸಮಾರಂಭದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶಾಸಕ ರವಿಕುಮಾರ್ ಗಣಿಗ ಪರೋಕ್ಷವಾಗಿ ಕೌಂಟರ್ ನೀಡಿದರು.
ಎಚ್‌ಡಿಕೆ ಭಾಷಣದ ವೇಳೆ, ಕಾರ್ಖಾನೆ ತರುವುದು ಸುಲಭವೆಂದು ನೀವು ಅಂದುಕೊಂಡಿದ್ದಿರಿ. ಅದು ರಾಜ್ಯ ಸರ್ಕಾರದ ಜವಾಬ್ದಾರಿ. ನನ್ನನ್ನು ನಂಬಿ ಪಕ್ಷ, ಜಾತಿ ಬೇದ ಇಲ್ಲದೆ ಆಶೀರ್ವಾದ ಮಾಡಿದ್ದೀರಿ. ನನ್ನ ಮೇಲೆ ನಿರೀಕ್ಷೆ ಇಟ್ಟು ಎಂಪಿ ಅವಕಾಶ ಕೊಟ್ಟಿದ್ದೀರಿ. ಕಾರ್ಖಾನೆ ನಿರ್ಮಾಣಕ್ಕೆ ಜಾಗ ಗುರುತಿಸಲು ಸೂಚನೆ ಕೊಟ್ಟಿದ್ದೇವೆ. ಅದರಂತೆ ಜಾಗ ಗುರುತಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದರು.
ಇದಕ್ಕೆ ತಮ್ಮ ಭಾಷಣದ ವೇಳೆ ಕೌಂಟರ್ ನೀಡಿದ ಶಾಸಕ ರವಿಕುಮಾರ್ ಗಣಿಗ, ಮಂಡ್ಯಕ್ಕೆ ಒಳ್ಳೆಯ ಕೈಗಾರಿಕೆಯನ್ನು ಕೊಡಿ. ನಾವು ನೂರು ಎಕರೆ ಜಾಗವನ್ನ ಗುರುತು ಮಾಡಿ ಇಟ್ಟಿದ್ದೇವೆ. ಮಂಡ್ಯ ಸುತ್ತಮುತ್ತ ಹಾಗೂ ಬಸರಾಳು ಬಳಿ ಜಾಗ ಗುರುತು ಮಾಡಿದ್ದೇವೆ. ನೀವು ಕೈಗಾರಿಕೆ ತಂದು ಯುವಕರಿಗೆ ಉದ್ಯೋಗ ಕೊಡಿಸಿ. ಚುನಾವಣೆ ವೇಳೆ ಹದಿನೈದು ದಿನ ರಾಜಕಾರಣ ಮಾಡೋಣ. ಮಂಡ್ಯದ ಅಭಿವೃದ್ಧಿ ವಿಚಾರವಾಗಿ ರಾಜಕಾರಣ ಬೇಡ ಎಂದರು.
ಮಂಡ್ಯ ನಗರದ ಮಾರುಕಟ್ಟೆ ಶೀತಲ ವ್ಯವಸ್ಥೆಯಲ್ಲಿ ಇತ್ತು. ಕಳೆದ ಸರ್ಕಾರ ನೂತನ ಮಾರುಕಟ್ಟೆಯ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿತು. ನಮ್ಮ ಸರ್ಕಾರ ಬಂದ ನಂತರ ಕೇಂದ್ರ ಸರ್ಕಾರ, ನಗರಸಭೆಯ ಅನುದಾನದಿಂದ ಸುಮಾರು 10 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ನೂತನ ಮಾರುಕಟ್ಟೆ ಸ್ಥಾಪನೆಯನ್ನು ಮಾಡಲಾಗಿದೆ. ಹಿಂದೆ ಇದ್ದ ಪಟ್ಟಿ ಪ್ರಕಾರ ನ್ಯಾಯಯುತವಾಗಿ ಯಾವುದೇ ಒತ್ತಡಕ್ಕೂ ಮಣಿಯದೆ ಮಳಿಗೆಯನ್ನು ಇನ್ನೂ 15 ದಿನದ ಒಳಗಾಗಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.