ಚನ್ನಪಟ್ಟಣ
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಪದೇಪದೆ ತಾಂತ್ರಿಕ ದೋಷ ಹಾಗೂ ವಿದ್ಯುತ್ ವ್ಯತ್ಯಯ ಸಮಸ್ಯೆಯಾಗಿ ಪರಿಣಮಿಸಿದೆ. ಜತೆಗೆ ಮಾರುಕಟ್ಟೆಯಲ್ಲಿ ಮೂಲಸೌಲಭ್ಯ ಕೊರತೆಯೂ ಕಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಈ ರೇಷ್ಮೆಗೂಡು ಮಾರುಕಟ್ಟೆ ವಹಿವಾಟು ನಡೆಸುವಲ್ಲಿಯೂ ಹೆಗ್ಗಳಿಕೆ ಹೊಂದಿದೆ. ಪ್ರತಿದಿನ ಲಕ್ಷಾಂತರ ರೂ. ವಹಿವಾಟು ನಡೆಸುವ ಮಾರುಕಟ್ಟೆಗೆ ಬರುವವರಿಗೆ ಮೂಲಸೌಕರ್ಯ ಮಾತ್ರ ಉತ್ತಮವಾಗಿಲ್ಲ.
ಕೈಕೊಡುವ ವಿದ್ಯುತ್!: ಮಾರುಕಟ್ಟೆಯಲ್ಲಿ ತಾಂತ್ರಿಕ ದೋಷ ಹಾಗೂ ವಿದ್ಯುತ್ ಸಮಸ್ಯೆ ಮಾಮೂಲಿ ಎನ್ನುವಂತಾಗಿದೆ. ಆಗಾಗ ವಿದ್ಯುತ್ ಸಮಸ್ಯೆ ಎದುರಾಗುತ್ತಿರುವುದರಿಂದ ರೇಷ್ಮೆಗೂಡು ಹರಾಜಿಗೆ ತೊಡಕಾಗುತ್ತದೆ. ಇದರೊಂದಿಗೆ, ಮಾರುಕಟ್ಟೆಯಲ್ಲಿ ಸೋಲಾರ್ ವಿದ್ಯುತ್ ಬಳಕೆ ಮಾಡುತ್ತಿದ್ದು, ಇದು ಸಹ ಸಮಸ್ಯೆಯ ಮೂಲವಾಗಿದೆ. ಇಲ್ಲಿ ಅಳವಡಿಸಿರುವ ಸೋಲಾರ್ ವಿದ್ಯುತ್ ದುರಸ್ತಿಯಾದರೆ, ಅದು ಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮ ಬೀರುತ್ತಿದೆ. ವಿದ್ಯುತ್ ಸಮಸ್ಯೆ ಖಂಡಿಸಿ ಈಗಾಗಲೇ ಹಲವಾರು ಬಾರಿ ರೈತರು ಪ್ರತಿಭಟನೆ ನಡೆಸಿದ್ದೂ ಉಂಟು. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ಗುರುವಾರವೂ ಪ್ರತಿಭಟನೆ!
ಆದರೆ, ಮಾರುಕಟ್ಟೆಯಲ್ಲಿ ತಾಂತ್ರಿಕ ದೋಷ ಹಾಗೂ ವಿದ್ಯುತ್ ಸಮಸ್ಯೆಯಿಂದ ಬಿಡ್ಡಿಂಗ್ ಡಿಸ್‌ಪ್ಲೇ ಬೋರ್ಡ್ ಕಾರ್ಯನಿರ್ವಹಿಸದೆ ರೈತರು ಗೊಂದಲಕ್ಕೊಳಗಾದರು. ಆಕ್ರೋಶಗೊಂಡ ರೈತರು ಮಾರುಕಟ್ಟೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ ನಡೆಸಿದ್ದಲ್ಲದೆ, ಬೆಂ-ಮೈ ಹೆದ್ದಾರಿ ಸಂಚಾರ ತಡೆಗೂ ಮುಂದಾದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
ರೈತರ ಆಕ್ರೋಶ!
ಮಾರುಕಟ್ಟೆಯಲ್ಲಿ ಲಾಟ್ ನಂ. ಹರಾಜು ದರ ಸೇರಿ ಎಲ್ಲವನ್ನು ಲಕದಲ್ಲಿ ಪ್ರದರ್ಶಿಸಲಾಗುತ್ತದೆ. ಆದರೆ, ವಿದ್ಯುತ್ ಸಮಸ್ಯೆಯಿಂದಾಗಿ ಈ ಮಾಹಿತಿ ಲಕಗಳು ಕಾರ್ಯನಿರ್ವಹಿಸುತ್ತಿಲ್ಲ. ಬುಧವಾರವೂ ಇದೇ ಸಮಸ್ಯೆಯಾಗಿತ್ತು. ಆದರೆ, ಸಮಸ್ಯೆ ಸರಿಪಡಿಸಲು ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ರೈತರು ಕಿಡಿಕಾರಿದರು. ಹರಾಜು ತಡವಾದರೆ, ನಮ್ಮ ಗೂಡಿನ ಇಳುವರಿ (ತೂಕ) ಕಡಿಮೆಯಾಗುತ್ತದೆ.
ಮಾರುಕಟ್ಟೆಯಲ್ಲಿ ಪದೇಪದೆ ಇದೇ ಸಮಸ್ಯೆಯಾದರೆ ನಮ್ಮ ಗತಿಯೇನು ಎಂದು ಮಾರುಕಟ್ಟೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಚ್ಚೆತ್ತ ಮಾರುಕಟ್ಟೆ ಸಿಬ್ಬಂದಿ ಮತ್ತು ಪೊಲೀಸರು, ವಿದ್ಯುತ್ ಸಮಸ್ಯೆ ಪರಿಹರಿಸಿ, ಡಿಸ್‌ಪ್ಲೇ ಲಕ ಕಾರ್ಯನಿರ್ವಹಿಸುವಂತೆ ನೋಡಿಕೊಂಡರು. ತದನಂತರ, ಒಂದು ಗಂಟೆ ತಡವಾಗಿ ಹರಾಜು ಪ್ರಕ್ರಿಯೆ ಆರಂಭಗೊಂಡಿತು.
ಒಟ್ಟಾರೆ, ನಗರದ ರೇಷ್ಮೆ ಗೂಡು ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಮೈಚಳಿ ಬಿಟ್ಟು ಮಾರುಕಟ್ಟೆಯ ಸುಧಾರಣೆಗೆ ಕ್ರಮವಹಿಸಬೇಕಾಗಿದೆ.
ಕಷ್ಟಪಟ್ಟು ಬೆಳೆದ ರೇಷ್ಮೆಗೂಡು ಮಾರಾಟಕ್ಕೆ ನೂರಾರು ರೈತರು ದೂರದ ಊರುಗಳಿಂದ ಬರುತ್ತಾರೆ. ಮಾರುಕಟ್ಟೆಯಲ್ಲಿ ರೈತರಿಗೆ ಮೂಲ ಸವಲತ್ತುಗಳಿರಲಿ, ಹರಾಜು ಪ್ರಕ್ರಿಯೆಯಲ್ಲೂ ಅವ್ಯವಸ್ಥೆ ಇದೆ ಎಂದರೆ ನಾಚಿಕೆಗೇಡು. ಮಾರುಕಟ್ಟೆ ಬಗ್ಗೆ ಅಧಿಕಾರಿಗಳು ಅಸಡ್ಡೆ ವಹಿಸುತ್ತಿದ್ದಾರೆ. ಹರಾಜು ತಡವಾದರೆ, ಗೂಡಿನ ತೂಕ ಕಡಿಮೆಯಾಗುತ್ತದೆ. ಇದರ ನಷ್ಟ ಯಾರು ಕೊಡುತ್ತಾರೆ.
ಗೋಪಾಲ್, ಶ್ಯಾನುಭೋಗನಹಳ್ಳಿ
ಸೋಲಾರ್ ಉಪಕರಣದಲ್ಲಿ ತಾಂತ್ರಿಕ ದೋಷ ಎದುರಾಗಿತ್ತು. ವಿದ್ಯುತ್ ಸಮಸ್ಯೆ ಬಗ್ಗೆ ಸಂಬಂಧಪಟ್ಟವರ ಜತೆ ಚರ್ಚಿಸಲಾಗಿದೆ. ಇನ್ನು ಮುಂದೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ಸೋಲಾರ್, ಯುಪಿಎಸ್ ಹಾಗೂ ವಿದ್ಯುತ್ ವ್ಯವಸ್ಥೆ ಎಲ್ಲವೂ ಇದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಈ ರೀತಿಯಾಗುತ್ತಿದೆ. ಎಲ್ಲವನ್ನೂ ಸರಿಪಡಿಸಲಾಗಿದೆ.
ಪುಟ್ಟಮಾದಯ್ಯ,ಮಾರುಕಟ್ಟೆ ಸಹಾಯಕ ನಿರ್ದೇಶಕ