ಚಿಕ್ಕಬಳ್ಳಾಪುರ: ಪಿತೃಪಕ್ಷ ದಿನಗಳ ಅವಧಿಯಲ್ಲಿ ಬೇಡಿಕೆಯು ಕುಸಿತದೊಂದಿಗೆ ಹೂವುಗಳ ದರವು ಪಾತಾಳಕ್ಕೆ ಬಿದ್ದಿದೆ.
ಹಿಂದೆ ಶ್ರಾವಣ ಮಾಸದಿಂದ ಕಳೆದ ಎರಡ್ಮೂರು ದಿನಗಳಿಂದ ದುಬಾರಿಯಾಗಿತ್ತು. ಆದರೆ, ಈಗ ಕೇಳುವವರೇ ಇಲ್ಲ. ಕನಿಷ್ಠ ೧೨೦ ರೂಗಳಿಂದ ಗರಿಷ್ಠ ೩೨೦ ರೂಗಳಿಗೆ ಮಾರವಾಗುತ್ತಿದ್ದ ಹೂವುಗಳ ದರವು ಕನಿಷ್ಠ ೧೦ ರಿಂದ ಗರಿಷ್ಠ ೬೦ ರೂಗಳಿಗೆ ಕುಸಿದಿದೆ. ಪ್ರಸ್ತುತ ಪಿತೃಪಕ್ಷದ ದಿನಗಳ ಅವಧಿಯಲ್ಲಿ ಯಾವುದೇ ಪೂಜಾ ಕಾರ್ಯಕ್ರಮಗಳು, ಮದುವೆ ಸೇರಿದಂತೆ ಶುಭ ಸಮಾರಂಭಗಳು ನಡೆಯದಿರುವುದರಿಂದ ಬೇಡಿಕೆಯು ಹಾಗೂ ದರವು
ನಿರಂತರವಾಗಿ ಕುಸಿಯುತ್ತಿದೆ. ಆದರೆ, ಹೂವುಗಳು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದರೂ ನಿರೀಕ್ಷೆಗೆ ಅನುಗುಣವಾಗಿ ದರ ಸಿಗುತ್ತಿಲ್ಲ. ರಸ್ತೆಯಲ್ಲಿ ಎಸೆದು ಹೋಗುವಂತಹ ಪರಿಸ್ಥಿತಿ ಇದೆ.
ಶ್ರಾವಣ ಮಾಸದಲ್ಲಿ ವೆಂಕಟರಮಣಸ್ವಾಮಿ ಸೇರಿದಂತೆ ವಿವಿಧ ದೇಗುಲಗಳಲ್ಲಿ ಧಾರ್ಮಿಕ ಆಚರಣೆಗಳು, ವರಮಹಾಲಕ್ಷ್ಮೀ ಹಾಗೂ ಗಣೇಶೋತ್ಸವದ ಹಿನ್ನೆಲೆಯಲ್ಲಿ ಹೂವುಗಳು ಬೇರೆ ಬೇರೆ ಸಾಗಾಣೆಯಾಗಿ, ಹೆಚ್ಚಿನ ಬೇಡಿಕೆ ಕಂಡು ಬಂದಿತ್ತು. ಈಗ ಇಲ್ಲ. ಇನ್ನೂ ದಸರಾ ಹಬ್ಬ ಹಾಗೂ ದೀಪಾವಳಿ ಹಬ್ಬವನ್ನು ಎದುರು ನೋಡುವಂತಾಗಿದೆ.
ಹೆಚ್ಚಿನ ದಿನ ಒಳ್ಳೆಯ ದರ ಸಿಕ್ಕಿದರೆ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸಲಿದೆ ಎಂಬ ನಿರೀಕ್ಷೆಯನ್ನು ಹೂವು ಬೆಳೆಗಾರರು ಹೊಂದಿದ್ದರು. ಆದರೆ, ಮಾರುಕಟ್ಟೆಯಲ್ಲಿ ದಿಢೀರನೇ ಏರುಪೇರಿನಿಂದ ನಷ್ಟದ ಲೆಕ್ಕಚಾರ ಹಾಕುವಂತಾಗಿದೆ. ಖರೀದಿ ಇಲ್ಲದೇ ತೋಟಗಳಲ್ಲಿ ಹಾಗೆಯೇ ಬಿಡುವ, ಇನ್ನೂ ರಸ್ತೆಗೆ ಸುರಿಯಬೇಕಾದ ಪರಿಸ್ಥಿತಿ ಉದ್ಭವವಾಗಿದೆ.
*ನಿರ್ವಹಣೆ ವೆಚ್ಚಕ್ಕೆ ಬರೆ
ಪ್ರಸ್ತುತ ಕೂಲಿ ಹಣವೂ ಸಿಗುತ್ತಿಲ್ಲ. ಇನ್ನೂ ಲಕ್ಷಾಂತರ ರೂ ಬಂಡವಾಳ ಹೂಡಿರುವ ರೈತರು ನಿರ್ವಹಣೆ ವೆಚ್ಚಕ್ಕೂ ಮಾರುಕಟ್ಟೆಯ ದರಕ್ಕೂ ಅಜಗಜಾಂತರ ವ್ಯತ್ಯಾಸಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿ ವೈಫಲ್ಯ, ಮಳೆಯ ಅಭಾವ ಸೇರಿದಂತೆ ನಾನಾ ಸಮಸ್ಯೆಗಳ ನಡುವೆ ಈ ಭಾಗದ ರೈತರು ವಿವಿಧ ಬಗೆಯ ಹೂವುಗಳನ್ನು ಬೆಳೆಯುತ್ತಿದ್ದಾರೆ. ಆಂಧ್ರ, ಮಹಾರಾಷ್ಟ್ರ, ಮಧ್ಯೆ ಪ್ರದೇಶ, ತೆಲಂಗಾಣದ ಜತೆಗೆ ದೇಶ ವಿದೇಶಗಳಿಗೆ ಪೂರೈಸುತ್ತಿದ್ದು ಹೂವುಗಳ ಪ್ರಮಾಣ ಹೆಚ್ಚಳವಾದಾಗ ಸೂಕ್ತ ಬೆಲೆ ಇಲ್ಲದಿರುವುದು, ಹೂವುಗಳು ಅಭಾವವಿದ್ದಾಗ ಅಧಿಕ ಬೇಡಿಕೆಯಿಂದ ಒಳ್ಳೆಯ ದರ ಸಿಗುವಂತಹುದು ಸಾಮಾನ್ಯ.