ಜಿಲ್ಲೆ

ಇದ್ದರೂ ಇಲ್ಲದಂತಾದ ಮಾರ್ಕಂಡೇಯ ಡ್ಯಾಂ ನೀರು

ಕೋಲಾರ ಡೆಸ್ಕ್

ಬೂದಿಕೋಟೆ: ಕೋಲಾರದ ಮಿನಿ ಕೆಆರ್​ಎಸ್​ ಎಂದು ಖ್ಯಾತಿ ಪಡೆದಿರುವ ಹಾಗೂ ರೈತರ ಕೃಷಿ ಚಟುವಟಿಕೆ ದೃಷ್ಟಿಯಿಂದ ನಿರ್ಮಿಸಿರುವ ಮಾರ್ಕಂಡೇಯ ಡ್ಯಾಂ ನೀರನ್ನು ಯಾವುದೇ ಕಾರ್ಯಗಳಿಗೆ ಬಳಸದೇ ರ್ನಿಲಕ್ಷ$್ಯವಹಿಸಿರುವುದರಿಂದ ಬಿಸಿಲಿನ ತಾಪಕ್ಕೆ ನೀರು ಣಿಸುತ್ತಿದೆ.

ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮ ಸಮೀಪದ ಎರಡು ಬೆಟ್ಟಗಳ ಮಧ್ಯೆ ಸರ್​.ಎಂ ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಜಲಾಶಯ ಪ್ರದೇಶದ ರೈತರಿಂದ ದೇಣಿಗೆ ಪಡೆದು ಕೃಷಿ ಬಳಕೆಗೆ ಮಾರ್ಕಂಡೇಯ ಜಲಾಶಯ ನಿರ್ಮಿಸಲಾಗಿದೆ. 1936ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್​ 4 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಮುಗಿಸಿ, ಅಂದಿನ ಸಂಸ್ಥಾನದ ದಿವಾನರಾಗಿದ್ದ ಸರ್​ ಮಿರ್ಜಾ ಇಸ್ಮಾಯಿಲ್​ರಿಂದ 1940ರಲ್ಲಿ ಲೋಕಾರ್ಪಣೆ ಮಾಡಿಸಿದ್ದರು. ಜಲಾಶಯ ಲೋಕಾರ್ಪಣೆಯಾದ ದಿನದಿಂದ ಸುಮಾರು 2,000 ಹೆಕ್ಟರ್​ಗಳಷ್ಟು ಅಚ್ಚುಕಟ್ಟು ವಿಸ್ತೀರ್ಣದ ಪ್ರದೇಶದಲ್ಲಿ ರೈತರು ನೀರನ್ನು ಬಳಸಿ, ಸಮೃದ್ಧವಾಗಿ ಭತ್ತ ಬೆಳೆಯುತ್ತಿದ್ದರು. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಭತ್ತ ಬೆಳೆಯುತ್ತಿದ್ದರಿಂದ ಬೂದಿಕೋಟೆಯನ್ನು ಭತ್ತದ ಕಣಜ ಅಂತಲೂ ಕರೆಯುತ್ತಿದ್ದರು. ಸಮೃದ್ಧವಾಗಿ ಭತ್ತ ಬೆಳೆಯುತ್ತಿದ್ದ ಭೂಮಿ ಈಗ ನೀರು ಹರಿಸದ ಕಾರಣ ಬರಡಾಗಿದೆ.

ವಿರೋಧದ ಮಧ್ಯೆ ನಿರ್ಮಾಣ: ಜಲಾಶಯವು 81 ಅಡಿ ಎತ್ತರ ಹೊಂದಿದ್ದು, 5 ಟಿಎಂಸಿ ನೀರು ಶೇಖರಣೆಯಾಗಿ, 75 ಅಡಿಗಳಿಗೆ ಕೋಡಿ ಹರಿಯುತ್ತದೆ. ಹೀಗೆ ಹರಿಯುವ ನೀರು ಯರಗೋಳ್​ ಡ್ಯಾಂ ಸೇರುತ್ತದೆ. 2008ರಲ್ಲಿ ಅಂದಿನ ಶಾಸಕ ಹಾಗೂ ಕೊಳೆಚೆ ಮತ್ತು ನೀರು ಸರಬರಾಜು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದ ಕೃಷ್ಣಯ್ಯಶೆಟ್ಟಿ ಅವರು ಜಲಾಶಯದಿಂದ ಮಾಲೂರು ಕ್ಷೇತ್ರದ 184 ಹಳ್ಳಿಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ 40 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿ 2008ರ ನ.9ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪರಿಂದ ಶಂಕುಸ್ಥಾಪನೆ ಮಾಡಿಸಿದರು. ಇದನ್ನು ವಿರೋಧಿಸಿ ಬೂದಿಕೋಟೆ ಭಾಗದ ರೈತರು ಅಂದಿನ ಗವರ್ನರ್​ ಹಂಸರಾಜ್​ ಭಾರದ್ವಾಜ್​ರಿಗೆ ಮತ್ತು ಸಿಎಂ ಮನವಿ ಸಲ್ಲಿಸಿ ಯೋಜನೆ ಕೈ ಬಿಡುವಂತೆ ಕೋರಿದ್ದರು. ಇಷ್ಟಾದರೂ ಪಟ್ಟು ಬಿಡದ ಮಾಲೂರಿನ ಶಾಸಕರು ಜಲಾಶಯದ ಅಂಗಳದಲ್ಲಿ ಬೃಹತ್​ ಪಂಪ್​ಹೌಸ್​ ನಿರ್ಮಿಸಿ, ಪೈಪ್​ಲೈನ್​ ಅಳವಡಿಸಿದರು. ನಂತರ ನೀರನ್ನು ಪಂಪ್​ ಮಾಡಿ ಟೇಕಲ್​ ಬಳಿ ನಿರ್ಮಿಸಿರುವಂತಹ ಶುದ್ದೀಕರಣ ಘಟಕಕ್ಕೆ ಹರಿಸಿದ್ದರು. ಯೋಜನೆಯ ಮೂಲಕ ಮಾಲೂರು ಕ್ಷೇತ್ರದ ಗ್ರಾಮಗಳಿಗೆ ವಾರ್ಷಿಕ 100 ಎಂ.ಸಿಗಳಷ್ಟು ನೀರನ್ನು ಹರಿಸಲು ಅಂದಾಜಿಸಲಾಗಿತ್ತು. ಆದರೆ ಈಗ ಆ ಕಾರ್ಯ ಸಹ ನೆನೆಗುದಿಗೆ ಬಿದ್ದಿದೆ.

ಇದರ ಬೆನ್ನಲ್ಲೇ ಬಂಗಾರಪೇಟೆ ಶಾಸಕ ಎಸ್​.ಎನ್​ ನಾರಾಯಣಸ್ವಾಮಿ ಜಲಾಶಯದ ನೀರನ್ನು ರೈತರ ಕೃಷಿ ಚಟುವಟಿಕೆಗಳಿಗೆ ಹರಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ರೈತರಿಗೆ ಈ ಹಿಂದೆ ವಿಶ್ವಾಸನೆ ನೀಡಿದ್ದರು. ಅದರಂತೆ ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸಿ ಅಲ್ಪ ಪ್ರಮಾಣದ ನೀರನ್ನು ಹರಿಸಿದ್ದರು. ಈಗ ಅದನ್ನೂ ಸಹ ಸ್ಥಗಿತಗೊಳಿಸಲಾಗಿದೆ. ಈಗ ಜಲಾಶಯದ ನೀರು ಮಾಲೂರು ತಾಲೂಕಿನ ಜನತೆಗೂ ಹರಿಯುತ್ತಿಲ್ಲ. ಇತ್ತ ಬಂಗಾರಪೇಟೆ ತಾಲೂಕಿನ ರೈತರಿಗೂ ನೀರನ್ನು ಹರಿಸಲು ಯಾವುದೇ ಇಲಾಖೆ ಮುಂದಾಗುತ್ತಿಲ್ಲ. ಇದರಿಂದಾಗಿ ಡ್ಯಾಂ ನೀರು ಬಳಕೆಯಾಗದೆ ನಿಂತಲ್ಲೇ ವ್ಯರ್ಥವಾಗುತ್ತಿದೆ. ಆದ್ದರಿಂದ ನೀರನ್ನು ಜನ ಹಾಗೂ ಜಾನುವಾರುಗಳ ಬಳಕೆಗೆ ಹರಿಸಬೇಕು ಎಂದು ಬೂದಿಕೋಟೆ ಭಾಗದ ಜನರು ಒತ್ತಾಯಿಸಿದ್ದಾರೆ.

ಶೇ.50 ವಂತಿಕೆ ನೀಡಿ ಮಾರ್ಕಂಡೇಯ ಜಲಾಶಯ ನಿಮಾರ್ಣ ಮಾಡಿದ್ದೀವಿ. ದಶಕಗಳ ಕಾಲ ನೀರನ್ನು ಬಳಸಿ ವ್ಯವಸಾಯ ಮಾಡುತ್ತಿದ್ದ್ದ ಅನ್ನದಾತನಿಗೆ ಸರ್ಕಾರ ಬರೆ ಎಳೆದಿದೆ. ಈಗ ಮಾಲೂರು ಜನತೆಗೆ ಯರಗೋಳ್​ ನೀರನ್ನು ಪೂರೈಸಲಾಗುತ್ತಿದೆ. ಬೂದಿಕೋಟೆ ಭಾಗದಲ್ಲಿ ಕೆರೆಕುಂಟೆಗಳು ಬತ್ತಿ ಹೋಗಿದ್ದು, ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಬಹುದು ಆದ ಕಾರಣ ಮಾರ್ಕಂಡೇಯ ಜಲಾಶಯದ ನೀರನ್ನು ಬೂದಿಕೋಟೆ ಕಡೆಗೆ ಹರಿಸಿದರೆ ಉತ್ತಮ.

- ವಿ.ಮಾರ್ಕಂಡೇಗೌಡ

ಬೂದಿಕೋಟೆ

ಮಾರ್ಕಂಡೇಯ ಜಲಾಶಯದ ನೀರನ್ನು ಯಾವುದೇ ಕಾರ್ಯಗಳಿಗೆ ಹರಿಸದೇ ನೀರನ್ನು ಶೇಖರಣೆ ಮಾಡಬೇಕು ಎಂದು ಆದೇಶವಿದೆ. ಮುಂದೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾದರೆ ಮತ್ತು ರೈತರು ಒತ್ತಾಯ ಮಾಡಿದರೆ ಇಲಾಖೆಯಿಂದ ಪರ್ಮಿಷನ್​ ತೆಗೆದುಕೊಂಡು ಕುಡಿಯುವ ಸಲುವಾಗಿ ನೀರನ್ನು ಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ.

- ಎಸ್​.ಎನ್​ ನಾರಾಯಣಸ್ವಾಮಿ

ಶಾಸಕ, ಬಂಗಾರಪೇಟೆ