ಮಾರ್ಕಂಡೇಯ ಡ್ಯಾಂಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರು ಗದ್ದೆಯಂತಾಗಿದೆ.
ಬಂಗಾರಪೇಟೆ ತಾಲೂಕಿನ ಬೂದಿಕೋಟೆಯ ಮಾರ್ಕಂಡೇಯ ಡ್ಯಾಂ ಬಳಿ ಮೂಲಸೌಲಭ್ಯ ಕೊರತೆ ಇದೆ.
ಮಿನಿ ಕೆಆರ್‌ಎಸ್ ಎಂದೇ ಕರೆಯಲ್ಪಡುವ ಡ್ಯಾಂ ಹತ್ತಾರು ವರ್ಷಗಳ ನಂತರ ಕೋಡಿ ಹರಿಯುತ್ತಿದೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಲಾಗಿದ್ದು, ಮೈಸೂರಿನ ಕೃಷ್ಣರಾಜಸಾಗರ ಅಣೆಕಟ್ಟ್ಟೆಯಂತೆಯೇ ಭಾಸವಾಗುತ್ತದೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ನಿರ್ಮಿಸಿದ್ದ ಡ್ಯಾಂನಲ್ಲಿ ಹತ್ತಾರು ವರ್ಷಗಳಿಂದ ನೀರು ಇರಲಿಲ್ಲ. ಆದರೆ ಈ ಬಾರಿ ತುಂಬಿದ್ದು, ಕೋಲಾರ, ಬೆಂಗಳೂರು, ತಮಿಳುನಾಡು, ಆಂಧ್ರಪ್ರದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಡ್ಯಾಂ ಬಳಿ ಮೂಲಸೌಕರ್ಯ ಕೊರತೆ: ಡ್ಯಾಂ ನೋಡಲು ಅಪಾರ ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮುಖ್ಯ ರಸ್ತೆಯಿಂದ ಡ್ಯಾಂವರೆಗೂ ರಸ್ತೆಯಲ್ಲಿ ಹಳ್ಳ-ಕೊಳ್ಳಗಳು ನಿರ್ಮಾಣವಾಗಿವೆ. ಮಳೆ ಬಂದರೆ ಕೆಸರುಗದ್ದೆಯಂತಾಗುವ ರಸ್ತೆಯಲ್ಲಿ ಸಂಚರಿಸುವುದು ಹರಸಾಹಸವಾಗಿದೆ. ರಸ್ತೆಯನ್ನು ಶೀಘ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಜಿಪಂ ಸಿಇಒ ಉಕೇಶ್ ಕುಮಾರ್ ಇತ್ತೀಚೆಗೆ ಭೇಟಿ ನೀಡಿದ್ದಾಗ ಹೇಳಿದ್ದರೂ ಇದುವರೆಗೂ ಅಭಿವೃದ್ಧಿ ಕಂಡಿಲ್ಲ.
ಕೋಡಿ ಹರಿಯುತ್ತಿರುವ ಮಾರ್ಕಂಡೇಯ ಡ್ಯಾಂನಲ್ಲಿ ಆಟ ಆಡುತ್ತಿರುವ ಪ್ರವಾಸಿಗರು.
ಮೀನುಗಾರಿಕಾ ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಡ್ಯಾಂಗೆ ಎರಡು ಬಾರಿ ಭೇಟಿ ನೀಡಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಹೇಳಿ ಹೋದರೇ ಹೊರತು ಹೇಳಿಕೆ ಕಾರ್ಯರೂಪಕ್ಕೆ ಬರಲಿಲ್ಲ.
ಇನ್ನು ಇದೇ ರೀತಿ ನವೆಂಬರ್‌ನಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಮಾಲೂರು ಶಾಸಕರು ಡ್ಯಾಂಗೆ ಬಾಗಿನ ಅರ್ಪಿಸಿ ಅಭಿವೃದ್ಧಿ ಭರವಸೆ ನೀಡಿದ್ದರು. ಆದರೆ ತಿಂಗಳುಗಳೇ ಕಳೆದರೂ ಅಭಿವೃದ್ಧಿ ಆರಂಭವಾಗಿಲ್ಲ.
ಡ್ಯಾಂನಲ್ಲಿ ನೀರಿದ್ದರೆ ವರ್ಷಪೂರ್ತಿ ಪ್ರವಾಸಿಗರು ಬಂದು ಹೋಗುತ್ತಾರೆ. ಡ್ಯಾಂ ಬಳಿ ಸಮಯ ಕಳೆಯಲು ನೆರಳು, ಆಸನ ವ್ಯವಸ್ಥೆ, ಮಕ್ಕಳು ಆಟವಾಡಲು ಪಾರ್ಕ್, ಪುಂಡಪೋಕರಿಗಳಿಂದ ರಕ್ಷಣೆ ಸೇರಿ ಮೂಲಸೌಕರ್ಯಗಳನ್ನು ಒದಗಿಸಿದರೆ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗುತ್ತದೆ. ಆದ್ದರಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಡ್ಯಾಂ ಅಭಿವೃದ್ಧಿಪಡಿಸಬೇಕು ಎಂಬುದು ಪ್ರವಾಸಿಗರ ಒತ್ತಾಯವಾಗಿದೆ.
ಮಾರ್ಕಂಡೇಯ ಡ್ಯಾಂ ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟಿರುವುದರಿಂದ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರತಿ ದಿನ ಇಲ್ಲಿಗೆ ನೂರಾರು ಪ್ರವಾಸಿಗರು ಬಂದು ನೀರಿನಲ್ಲಿ ಆಟವಾಡುತ್ತಾ ಸಮಯ ಕಳೆಯುತ್ತಾರೆ. ಆದರೆ ಡ್ಯಾಂ ಬಳಿ ಶೌಚಗೃಹ ವ್ಯವಸ್ಥೆ ಸೇರಿ ಮೂಲಸೌಕರ್ಯಗಳ ಕೊರತೆ ಇದ್ದು, ಸಂಬಂಧಪಟ್ಟ ಇಲಾಖೆ ಸೌಲಭ್ಯ ಕಲ್ಪಿಸಬೇಕು.
| ಲಲಿತಾ, ಪ್ರವಾಸಿಗರು ಬಂಗಾರಪೇಟೆ
ಹಲವು ವರ್ಷಗಳ ನಂತರ ಡ್ಯಾಂ ತುಂಬಿರುವ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಳೆದ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಮಳೆ ಕಡಿಮೆಯಾದ ನಂತರ ರಸ್ತೆ, ಶೌಚಗೃಹ ಸೇರಿ ಹಲವು ಮೂಲಸೌಕರ್ಯ ಕಲ್ಪಿಸಲಾಗುವುದು.
| ವೆಂಕಟ್‌ರಾಜ, ಜಿಲ್ಲಾಧಿಕಾರಿ ಕೋಲಾರ