ಜಿಲ್ಲೆ

ಕೃಷಿ ವಿವಿ ಸ್ಥಾಪನೆ ಸಚಿವ ಸಂಪುಟದ ಅನುಮೋದನೆಗೆ ಸ್ವಾಗತಾರ್ಹ: ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಶ್ಲಾಘನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಸೂರು, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿನ ಕೃಷಿ ಕಾಲೇಜು ಮತ್ತು ಸಂಶೋಧನಾ ಕೇಂದ್ರಗಳ ಒಳಗೊಂಡಂತೆ ವಿ.ಸಿ ಫಾರ್ಮ್‌ನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಎಂದು ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಹೇಳಿದ್ದಾರೆ.

ವಿ.ಸಿ ಫಾರ್ಮ್‌ನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದು ವಿಧಾನ ಪರಿಷತ್‌ನಲ್ಲಿ ಹಲವು ಬಾರಿ ಚರ್ಚೆಗೆ ಬಂದಿತ್ತು. ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಶಾಸಕರು, ಎಂಎಲ್‌ಸಿಗಳು ಸಿಎಂ ಹಾಗೂ ಡಿಸಿಎಂ ಅವರನ್ನು ಒತ್ತಾಯ ಮಾಡಿದ ಹಿನ್ನಲೆಯಲ್ಲಿ 2023-24ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿ ತಜ್ಞರ ಸಮಿತಿಯನ್ನು ನೇಮಿಸಿತ್ತು. ಸಮಿತಿಯ ವರದಿಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದು ಸಂತೋಷದ ಸಂಗತಿ ಎಂದಿದ್ದಾರೆ.

ಮೈಸೂರು, ಕೊಡಗು, ಚಾಮರಾಜನಗರ ಹಾಗೂ ಹಾಸನ ಕೃಷಿ ಪ್ರಧಾನವಾದ ಜಿಲ್ಲೆ. ಕೆಆರ್‌ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯದಿಂದ ಕೂಡಿವೆ. ಆದ್ದರಿಂದ ಕೃಷಿ ವಿವಿ ಸ್ಥಾಪನೆಯಿಂದ ಐದು ಜಿಲ್ಲೆಯಲ್ಲಿ ವೈಜ್ಞಾನಿಕ ಕೃಷಿ ಚಟುವಟಿಕೆ ಜತೆಗೆ ಸಂಶೋಧನೆಗೆ ತುಂಬಾ ಸಹಕಾರಿಯಾಗಿದೆ. ಇದರೊಂದಿಗೆ ತೋಟಗಾರಿಕೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ, ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.