ಜಿಲ್ಲೆ

ಸಾಗರ ಉತ್ಪನ್ನ ಸಂಶೋಧನಾ ಕೇಂದ್ರ, ಬಯೋಟೆಕ್ ಇನ್ನೊವೇಶನ್ ಸೆಂಟರ್ ಬ್ಲೂ ಇಕಾನಮಿಯ ಭಾಗ

ವೇಣುವಿನೋದ್ ಕೆ.ಎಸ್. ಮಂಗಳೂರು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಸ್ತಾಪಿಸಿರುವ ‘ಬಯೋಟೆಕ್ ಇನ್ನೊವೇಶನ್ ಸೆಂಟರ್ ಫಾರ್ ಅಕ್ವಾ ಮರೈನ್’ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ್ದ ‘ನೀಲಿ ಆರ್ಥಿಕತೆ’ (ಬ್ಲೂ ಇಕಾನಮಿ)ಯ ಭಾಗ.

ಮೀನು ಮತ್ತು ಸಮುದ್ರ ಕಳೆಗಳಿಂದ (ಸೀವೀಡ್) ಲಭಿಸುವ ಜೈವಿಕ ಕ್ರಿಯಾಶೀಲ ಸಂಯುಕ್ತದಿಂದ (ಬಯೋ ಆ್ಯಕ್ಟೀವ್ ಕಾಂಪೋಂಡ್) ಲಘು ಆಹಾರ ತಯಾರಿಸುವ ಕುರಿತು ಉತ್ತೇಜನಕ್ಕಾಗಿ ಈ ಅಕ್ವಾ ಮರೈನ್ ಆಧುನಿಕ ಜೈವಿಕ ತಂತ್ರಜ್ಞಾನ ಅನ್ವೇಷಣಾ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿದೆ.

ಇಂತಹ ಕೇಂದ್ರ ದೇಶದಲ್ಲಿ ಎಲ್ಲೂ ಇದುವರೆಗೆ ಸ್ಥಾಪನೆಯಾಗಿಲ್ಲ. ಆದರೆ ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಪ್ರಕಟಿಸಿರುವ ಬ್ಲೂ ಇಕಾನಮಿ ನೀತಿಯಲ್ಲಿ ಪ್ರಸ್ತಾಪವಾಗಿರುವ ಮೆರೈನ್ ಬಯೋಟೆಕ್ ಕೇಂದ್ರದ ಮಾದರಿಯಲ್ಲೇ ಇದನ್ನೂ ಪ್ರಸ್ತಾಪಿಸಲಾಗಿದೆ ಎನ್ನುತ್ತಾರೆ ತಜ್ಞರು.

ಕೆಲ ತಿಂಗಳ ಹಿಂದೆ ಕೊಚ್ಚಿನ್-ಮಂಗಳೂರು ಗ್ಯಾಸ್ ಪೈಪ್‌ಲೈನ್ ಉದ್ಘಾಟಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕರಾವಳಿ ರಾಜ್ಯಗಳಲ್ಲಿ ಬ್ಲೂ ಇಕಾನಮಿ ಯೋಜನೆ ಜಾರಿ ಬಗ್ಗೆ ಪ್ರಸ್ತಾಪಿಸಿದ್ದರು. ಮೀನುಗಾರಿಕೆ, ಸೀವೀಡ್, ಬಂದರುಗಳ ಅಭಿವೃದ್ಧಿ ಇತ್ಯಾದಿ ಕುರಿತು ಸೂಚ್ಯವಾಗಿ ನುಡಿದಿದ್ದರು.

ಕರಾವಳಿಗೆ ಅಗತ್ಯ: ಗುಜರಾತ್‌ನ ಜಾಮ್‌ನಗರದಲ್ಲಿ ಬಯೋಟೆಕ್ ಇನ್ನೊವೇಶನ್ ಸೆಂಟರ್ ಕುರಿತು ಪ್ರಸ್ತಾಪವಿದ್ದರೂ ಅದು ಸ್ಥಾಪನೆಯಾಗಿಲ್ಲ. ಆದರೆ ಮಂಗಳೂರಿನಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಈ ಕೇಂದ್ರಕ್ಕೆ 2.5 ಕೋಟಿ ರೂ. ಬಿಡುಗಡೆಯನ್ನೂ ಮಾಡಲಾಗಿದೆ. ಆದರೆ ಇದರ ನಿರ್ದಿಷ್ಟ ಉದ್ದೇಶಗಳೇನು ಎನ್ನುವ ಬಗ್ಗೆ ಸ್ಥಳೀಯವಾಗಿ ಮೀನುಗಾರಿಕಾ ಇಲಾಖೆಗೆ ಮಾಹಿತಿ ಇಲ್ಲ. ಮೀನುಗಾರಿಕಾ ಮಹಾವಿದ್ಯಾಲಯದ ತಜ್ಞರ ಪ್ರಕಾರ, ಭವಿಷ್ಯದ ಸಮುದ್ರ ಜಲಸಂಪನ್ಮೂಲವನ್ನು ಹೆಚ್ಚಿನ ಮಟ್ಟಿಗೆ ಬಳಕೆ ಮಾಡಿಕೊಳ್ಳುವುದಕ್ಕೆ ಈ ಕೇಂದ್ರ ನೆರವಾಗಬಹುದು.

ಕೇಂದ್ರ ಸರ್ಕಾರದ ಭೂವಿಜ್ಞಾನ ಸಚಿವಾಲಯದವರ ಯೋಜನೆಯನ್ನು ನೋಡಿಕೊಂಡು ರಾಜ್ಯ ಸರ್ಕಾರ ಮಂಗಳೂರಿಗೆ ಇಂತಹ ಕೇಂದ್ರವನ್ನು ನೀಡಿರಬಹುದು ಎನ್ನುತ್ತಾರೆ ಮೀನುಗಾರಿಕಾ ವಿವಿ ಡೀನ್ ಡಾ.ಸೆಂಥಿಲ್‌ವೇಲ್.

ಯಾವುದೆಲ್ಲ ಉದ್ದೇಶ?: ಮೀನುಗಾರಿಕಾ ವಿವಿ ಡೀನ್ ಡಾ.ಸೆಂಥಿಲ್‌ವೇಲ್ ಪ್ರಕಾರ ಇಂತಹ ಕೇಂದ್ರ ಇಲ್ಲಿಗೆ ಅತಿ ಅಗತ್ಯ. ಯಾಕೆಂದರೆ ಕರ್ನಾಟಕದಲ್ಲಿ ಸಮುದ್ರ ಸಂಪನ್ಮೂಲದ ಬಗ್ಗೆ ಸಂಶೋಧನೆಗೆ ಕೇಂದ್ರಗಳೇ ಕಡಿಮೆ. ಗುಜರಾತ್, ಮಹಾರಾಷ್ಟ್ರಗಳಲ್ಲಿ ಓಷನೋಗ್ರಫಿ ಅಧ್ಯಯನ ಕೇಂದ್ರಗಳಿವೆ, ಕೇರಳದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅರ್ತ್‌ಸೈನ್ಸಸ್ ಸ್ಟಡೀಸ್ ಇದೆ. ತಮಿಳುನಾಡಿನಲ್ಲಿ ಅಂತಹ ನಾಲ್ಕು ಕೇಂದ್ರಗಳಿವೆ. ಆಂಧ್ರದಲ್ಲೂ ಇದೆ. ಹಾಗಾಗಿ ಬಯೋಟೆಕ್ ಕೇಂದ್ರವಾದರೂ ಬಂದಿರುವುದು ಸ್ವಾಗತಾರ್ಹ.

ಸೀವೀಡ್‌ನ್ನು ಆಹಾರವಾಗಿ ಬಳಕೆ ಮಾಡಬಹುದು. ಅಲ್ಲದೆ ಕೆಲವು ವಿಧದ ಸೀವೀಡ್‌ಗಳಿಂದ ರಾಸಾಯನಿಕಗಳನ್ನು ಪ್ರತ್ಯೇಕಿಸಿ ಔಷಧ ತಯಾರಿ, ಕೆಲವು ವಿಧದ ಆಹಾರ ವಸ್ತು ತಯಾರಿ, ಸಮುದ್ರ ಪಾಚಿಗಳಿಂದ ಬಯೋಇಂಧನ ಉತ್ಪಾದನೆ ಕುರಿತು ಸಂಶೋಧನೆ ನಡೆಸಬಹುದಾಗಿದೆ.

ಅಲ್ಲದೆ, ಕರ್ನಾಟಕ ಕರಾವಳಿಯಲ್ಲಿ ಎಷ್ಟೋ ಹೆಕ್ಟೇರ್ ಭೂಮಿ ಸಮುದ್ರದ ಲವಣಾಂಶಯುಕ್ತ ನೀರಿನ ಅತಿಕ್ರಮಣಕ್ಕೊಳಗಾಗಿದೆ. ಅಲ್ಲಿಗೆ ಸೂಕ್ತವೆನಿಸುವ ಬೆಳೆಯನ್ನೂ ಅಭಿವೃದ್ಧಿಪಡಿಸಬಹುದು. ಈ ಎಲ್ಲ ವಿಚಾರಗಳಿಗೆ ನೂತನ ಕೇಂದ್ರ ಕೆಲಸ ಮಾಡಬಹುದು ಎನ್ನುತ್ತಾರೆ ಡಾ.ಸೆಂಥಿಲ್ ವೇಲ್.

ಹಿಂದೆ ಮೀನುಗಾರಿಕಾ ಕಾಲೇಜಿನಲ್ಲಿ ಒಮ್ಮೆ ಸಭೆ ನಡೆದಾಗ ಮೀನುಗಾರಿಕಾ ಸಚಿವರೂ ಇದ್ದರು. ಇಂತಹ ಕೇಂದ್ರದ ಬಗ್ಗೆ ಚರ್ಚೆಯಾಗಿತ್ತು. ಈಗ ಅದನ್ನು ಬಜೆಟ್‌ನಲ್ಲಿ ಸೇರಿಸಿದ್ದಾರೆ. ಅದು ಹೇಗಿರಲಿದೆ ಎಂಬ ಬಗ್ಗೆ ಗೈಡ್‌ಲೈನ್ಸ್ ಬರಬೇಕಷ್ಟೇ. ಸೀವೀಡ್ ಕಲ್ಚರ್ ಹಾಗೂ ಮೀನುಗಾರಿಕೆಯ ಹೊಸ ತಂತ್ರಜ್ಞಾನ ಅಭಿವೃದ್ಧಿ ಕುರಿತು ಇದು ಗಮನಹರಿಸಲಿದೆ. ಹರೀಶ್, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ, ಮಂಗಳೂರು