ಜಿಲ್ಲೆ

ಮರಿಮಲ್ಲಪ್ಪ ಕಾಲೇಜಿನಲ್ಲಿ ಮರಿಮಲ್ಲಪ್ಪನವರ ಸಂಸ್ಮರಣೋತ್ಸವ

ಸದೇಶ್ ಕಾರ್ಮಾಡ್

ಮೈಸೂರು: ಶಿಕ್ಷಣ ಎಂಬುದು ಒಂದು ಸಮಾಜವನ್ನು ಜ್ಞಾನದ ಕಡೆಗೆ ಸಾಗಿಸುವ ಮಾನವೀಯ ಬೆಳಕು ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಹೇಳಿದರು.

ಮರಿಮಲ್ಲಪ್ಪನವರ ಪದವಿ ಪೂರ್ವ ಕಾಲೇಜು ವತಿಯಿಂದ ಶುಕ್ರವಾರ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಗುರಿಕಾರ್ ಮರಿಮಲ್ಲಪ್ಪನವರ ಸಂಸ್ಮರಣೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ನಮಗೆ ಅರಿವನ್ನು ನೀಡುತ್ತದೆ. ಹಾಗಾಗಿ ಎಲ್ಲ ದಾನಕ್ಕಿಂತಲ್ಲೂ ಶ್ರೇಷ್ಠವಾದ ದಾನ ವಿದ್ಯಾದಾನ ಎಂದರು.

ಸ್ವಾತಂತ್ರೃ ಪೂರ್ವದಲ್ಲಿಯೇ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಒಂದು ಗುಡಿ ನಿರ್ಮಾಣ ಮಾಡಿದರೆ ಭಿಕ್ಷುಕರನ್ನು ಸೃಷ್ಟಿಸುತ್ತೇವೆ, ಒಂದು ಶಾಲೆ ತೆರೆದರೆ ವಿದ್ವಾಂಸರನ್ನು ಸೃಷ್ಟಿಸಬಹುದು ಎಂಬ ನಂಬಿಕೆಯನ್ನು ಮರಿಮಲ್ಲಪ್ಪ ಹೊಂದಿದ್ದರು. ಆ ಕಾರಣಕ್ಕೆ ಅವರು ಶಾಲೆಯನ್ನು ನಿರ್ಮಾಣ ಮಾಡಿದರು ಎಂದು ಹೇಳಿದರು.

ವಿದ್ಯೆಯನ್ನು ಸಂಪತ್ತು ಸೃಷ್ಟಿಯ ದೃಷ್ಟಿಕೋನದಿಂದ ನಾವು ನೋಡುತ್ತಿರುವುದು ಸರಿಯಲ್ಲ. ಇಡೀ ಮಾನವ ಕುಲ ಎಂದು ಭಾವಿಸುವುದೇ ನಿಜವಾದ ಶಿಕ್ಷಣ, ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ನಾಡು, ನುಡಿಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.

ಮರಿಮಲ್ಲಪ್ಪನವರ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಪ್ರೊ.ಕೆ.ಎನ್. ಪಂಚಾಕ್ಷರಸ್ವಾಮಿ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಪ್ರಭಾರ ಉಪನಿರ್ದೇಶಕ ಎಂ.ವಿ.ಹನುಮಂತರಾವ್, ಕಾಲೇಜು ಪ್ರಾಂಶುಪಾಲ ಡಾ.ಅನಿಲ್ ಎಸ್. ಕರಭೀಮಗೋಳ್, ಕಾಲೇಜಿನ ಶೈಕ್ಷಣಾಧಿಕಾರಿ ಮಂಗಳಾ ಮುದ್ದುಮಾದಪ್ಪ ಇದ್ದರು.