ಶಿರಸಿ: ಕಳೆದ ಮಾರಿಕಾಂಬಾ ಜಾತ್ರೆ ಉತ್ತಮವಾಗಿಸಲು ನಗರಸಭೆ ಶ್ರಮ ವಹಿಸಿದೆ. ಇದಕ್ಕಾಗಿ ಖರ್ಚು ಮಾಡಲಾದ ಹಣದ ಶೇ.50ರಷ್ಟು ಮಾರಿಕಾಂಬಾ ದೇವಾಲಯದಿಂದ ಭರಣ ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ದೇವಾಲಯದ ಆಡಳಿತ ಮಂಡಳಿ ಮೀನಮೇಷ ಎಣಿಸುತ್ತಿದೆ ಎಂಬ ವಿಷಯ ಸೋಮವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.
ಅಧ್ಯಕ್ಷೆ ಶರ್ವಿುಳಾ ಮಾದನೇರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯವನ್ನು ನಗರಸಭೆ ಅಧಿಕಾರಿಗಳು ಗಮನಕ್ಕೆ ತಂದರು. ಜಾತ್ರೆಯ ವೇಳೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ, ಸ್ವಚ್ಛತಾ ಕಾರ್ಯ ಸೇರಿದಂತೆ ಒಟ್ಟು 1.10 ಕೋಟಿ ರೂ. ಖರ್ಚು ತಗುಲಿದೆ. ಈ ಹಣದ ಶೇ. 50ರಷ್ಟು ಅಂದರೆ 55 ಲಕ್ಷ ರೂ.ಗಳನ್ನು ಮಾರಿಕಾಂಬಾ ದೇವಸ್ಥಾನ ನಗರಸಭೆಗೆ ಭರಣ ಮಾಡಬೇಕಿದೆ. ಆದರೆ, ಈಗ ದೇವಾಲಯದ ಆಡಳಿತ ಮಂಡಳಿ ನಗರಸಭೆ ಖರ್ಚು ಮಾಡಿದ ಹಣದ ಲೆಕ್ಕ ಕೇಳುತ್ತಿದೆ ಎಂದರು.
ಈ ಕುರಿತು ಸಭೆಯಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ, ದಯಾ ನಾಯ್ಕ, 2022ರ ಜಾತ್ರೆಯಲ್ಲಿ ಈ ಖರ್ಚು ವೆಚ್ಚದಲ್ಲಿ 17 ಲಕ್ಷ ರೂ. ಮಾತ್ರ ಮಾರಿಕಾಂಬಾ ದೇವಾಲಯದಿಂದ ಭರಣ ಮಾಡಿಸಿಕೊಳ್ಳಲಾಗಿತ್ತು. ಈ ಜಾತ್ರೆಯಲ್ಲಿ ನಗರಸಭೆ ಕೂಡ ಸ್ವಚ್ಛತಾ ಮತ್ತು ನಿರ್ವಹಣಾ ಖರ್ಚನ್ನು 1.10 ಕೋಟಿ ರೂ.ಗೆ ಏರಿಸಿದೆ. ಮಾರಿಕಾಂಬಾದೇವಿ ಜಾತ್ರೆಯಲ್ಲಿ ಅಂಗಡಿಗಳನ್ನು ನಡೆಸಲು ನಾವೂ ಜಾಗದ ಹರಾಜು ನಡೆಸಿದ್ದೇವೆ, ಜಾತ್ರೆಯ ಹೆಸರಿನಲ್ಲಿ ನಗರಸಭೆಗೂ ಆದಾಯ ಸಂದಾಯವಾಗಿದೆ. ಹೀಗಾಗಿ, ಮಾರಿಕಾಂಬಾ ಜಾತ್ರೆ ನಮ್ಮ ಊರಿನ ಧಾರ್ವಿುಕ ವಿಷಯವಾಗಿದ್ದರಿಂದ ದೇವಾಲಯದ ಆಡಳಿತ ಮಂಡಳಿಯೊಂದಿಗೆ ಹಗ್ಗ ಜಗ್ಗಾಟ ಬೇಡ. ಸಾಧ್ಯವಾದಷ್ಟು ಮಾತುಕತೆಯಲ್ಲಿ ಬಗೆಹರಿಸಿಕೊಳ್ಳೋಣ ಎಂದರು.
ಕೆಲ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಖರ್ಚು ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಅದನ್ನು ಮಾರಿಕಾಂಬಾ ದೇವಾಲಯಕ್ಕೆ ಜಾತ್ರಾ ಪೂರ್ವವೇ ಸಲ್ಲಿಸಿಯಾಗಿತ್ತು. ಆ ವೇಳೆ ಸುಮ್ಮನಿದ್ದ ಆಡಳಿತ ಮಂಡಳಿ, ಜಾತ್ರೆಯ ಬಳಿಕ ಖರ್ಚು ವೆಚ್ಚ ಕೇಳುತ್ತಿದೆ. ಅಲ್ಲದೆ, ಶೇ. 50ರಷ್ಟು ಹಣವನ್ನು ದೇವಾಲಯದ ವತಿಯಿಂದ ಭರಣ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆದೇಶವಾಗಿದ್ದರಿಂದ ಅದನ್ನು ನಾವು ಪಾಲಿಸಲೇಬೇಕಿದೆ ಎಂದರು. ಅಂತಿಮವಾಗಿ ದೇವಾಲಯದ ಆಡಳಿತ ಮಂಡಳಿಯೊಂದಿಗೆ ಸೌಹಾರ್ದಯುತವಾಗಿ ರ್ಚಚಿಸಿ ನಿರ್ಣಯ ಕೈಗೊಳ್ಳಲು ತೀರ್ವನಿಸಲಾಯಿತು.
ನಗರದಲ್ಲಿ ಬೀದಿ ವ್ಯಾಪಾರಿಗಳಿಂದ ಕೆಲವೆಡೆ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಕೆಲ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬದುಕಿನ ಸಲುವಾಗಿ ಬಡವರು ರಸ್ತೆ ಬದಿ ಕುಳಿತು ವ್ಯಾಪಾರ ಮಾಡುತ್ತಾರೆ. ನಗರದ ಬನವಾಸಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಫುಟ್ ಪಾತ್ ಮೇಲೆ ಅಂಗಡಿ ತೆಗೆದು ವ್ಯಾಪಾರ ನಡೆಸುವವರು ಅನೇಕರಿದ್ದಾರೆ. ತೆರವುಗೊಳಿಸುವುದಾದರೆ ಎಲ್ಲ ಅತಿಕ್ರಮಿತ ಅಂಗಡಿಗಳನ್ನೂ ತೆರವುಗೊಳಿಸಿ ಎಂದು ಆಗ್ರಹಿಸಿದರು.
ಪಂಡಿತ ಸಾರ್ವಜನಿಕ ಆಸ್ಪತ್ರೆಗಾಗಿ ನೀಡಿರುವ ನಗರಸಭೆ ಜಾಗಕ್ಕೆ ಬದಲಿ ಜಾಗ ಪಡೆಯುವುದು, ಘನ ತ್ಯಾಜ್ಯ ನಿರ್ವಹಣೆಗೆ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ, ಅಬಕಾರಿ ಇಲಾಖೆ ಸಮೀಪ ಇರುವ ನಗರಸಭೆಯ ಖಾಲಿ ನಿವೇಶನದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಕುರಿತು ರ್ಚಚಿಸಲಾಯಿತು.
ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಪೌರಾಯುಕ್ತ ಕಾಂತರಾಜು ಇತರರಿದ್ದರು.