ಎನ್.ಆರ್.ಪುರ: ಈ ಬಾರಿ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬ ದೇವಿ ಜಾತ್ರೋತ್ಸವ 20 ರಿಂದ 22ರ ವರೆಗೆ ಮೈಸೂರು ದಸರಾ ಮಾದರಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಹೇಳಿದರು.
ಶ್ರೀ ಕೋಟೆ ಮಾರಿಕಾಂಬ ದೇಗುಲಕ್ಕೆ ಕೆಳದಿ ರಾಜರ ಕಾಲದ ಇತಿಹಾಸವಿದೆ. ಈ ಬಾರಿ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಜಾತ್ರೆಗೆ ಎಲ್ಲ ಧರ್ಮದವರು ಸಹಕಾರ ನೀಡಿದ್ದಾರೆ. ಮೇ.20, 21 ಮತ್ತು 22ರಂದು ಮೂರು ದಿನ ಜಾತ್ರೆ ನಡೆಯಲಿದ್ದು, ಮೊದಲ ದಿನ ಶ್ರೀದೇವಿಗೆ ದೃಷ್ಠಿಯಿಡುವ ಕಾರ್ಯಕ್ರಮ, ದೃಷ್ಠಿಯಿಟ್ಟ ಕೂಡಲೇ ದೇವಿ ಮುಂದಿರುವ ಹುಲ್ಲಗೆ ಬೆಂಕಿ ಹತ್ತಿಕೊಳ್ಳುವುದು ಜಾತ್ರೆ ವಿಶೇಷವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂತರ ದೇವಿ ವಿಗ್ರಹವನ್ನು ಮಡಬೂರು ದಾನಿವಾಸ ದುರ್ಗಾಂಬ, ಮೇದರಬೀದಿಯ ಶ್ರೀ ಅಂತರಘಟ್ಟಮ್ಮ ದೇವಿ, ಹಳೇಪೇಟೆ ಶ್ರೀಗುತತ್ಯೃಮ್ಮ ದೇವಿ ಸೇರಿದಂತೆ ವಿವಿಧ ಗ್ರಾಮದ ಪ್ರಮುಖ ಗ್ರಾಮ ದೇವತೆಗಳೊಂದಿಗೆ, ವಾದ್ಯಗೋಷ್ಠಿಯೊಂದಿಗೆ ಅಗ್ರಹಾರದ ಬೀದಿಗೆ ತಂದು ಪ್ರತಿಷ್ಟಾಪಿಸಲಾಗುವುದು. ಅಲ್ಲಿ ರಾತ್ರಿಯವರೆಗೂ ಬ್ರಾಹ್ಮಣರ ಸಂಪ್ರದಾಯದಂತೆ ಪೂಜೆ ನಡೆಸಿದ ನಂತರ ಮಡಲಕ್ಕಿ ತುಂಬುವ ಕಾರ್ಯ ಜರುಗಲಿದೆ. ರಾತ್ರಿ ಬ್ರಾಹ್ಮಣ ಸಮುದಾಯದವರು ದೇವಿಯನ್ನು ಮಾರಿಕಾಂಬ ಜಾತ್ರಾ ಸಮಿತಿಗೆ ಹಸ್ತಾಂತರಿಸುತ್ತಾರೆ. ಆಕರ್ಷಕ ಮೆರವಣಿಗೆಯೊಂದಿಗೆ, ವಿವಿಧ ಸ್ತಬ್ಧಚಿತ್ರಗಳು, ವಾದ್ಯಗೋಷ್ಠಿ, ಸಾಂಸ್ಕೃತಿಕ ಕಲಾತಂಡಗಳು ಹಾಗೂ ಆಕರ್ಷಕ ಸಿಡಿಮದ್ದಿನ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದರು.
ಮೆರವಣಿಗೆ ಪಟ್ಟಣ ಪಂಚಾಯಿತಿ ಮುಂದೆ ಬರುತ್ತಿದ್ದಂತೆ ದೇವಿಗೆ ನಾಲಿಗೆಯನ್ನಿರಿಸಿ ಮಾರಿಯನ್ನಾಗಿ ಮಾಡಿ ಕರೆದುಕೊಂಡು ಹೋಗಲಾಗುವುದು. ಮೇ.20 ರಂದು ಬೆಳಗ್ಗೆ ದೇವಿ ವಿಗ್ರಹವನ್ನು ಮೂಲ ಮಾರಿ ಗದ್ದುಗೆ ಮೇಲೆ ಪ್ರತಿಷ್ಠಾಪಿಸಲಾಗುವುದು. 21ರಂದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.