ಬೆಳಗಾವಿ: ಗಾಂಜಾ ಮಾರಾಟ ದಂಧೆಗೆ ಕಡಿವಾಣ ಹಾಕಲು ದಾಳಿ ಮುಂದುವರಿಸಿರುವ ಪೊಲೀಸರು, ಪ್ರತ್ಯೇಕ ಘಟನೆಯಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 23,050 ರೂ. ಮೌಲ್ಯದ 3.095 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಐನಾಪುರ ಪಟ್ಟಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, ಅವರಿಂದ 12 ಸಾವಿರ ರೂ. ಮೌಲ್ಯದ 600 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಐನಾಪುರ ಪಟ್ಟಣದ ನಿವಾಸಿಗಳಾದ ಶಂಕರ ಅಣ್ಣಪ್ಪ ಪಾರಶೆಟ್ಟಿ (44), ಬಸಪ್ಪ ಬಾಬು ಪಾರಶೆಟ್ಟಿ (43) ಬಂಧಿತರು. ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲ್ಲೂರ: ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಕಬ್ಬಿನ ಬೆಳೆ ಮಧ್ಯೆ ಗಾಂಜಾ ಬೆಳೆದಿದ್ದ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ವಿಠಲ ಫಕೀರಪ್ಪ ಸುಣಧೋಳ (32) ಬಂಧಿತ ಆರೋಪಿ. ಗಾಂಜಾ ಮಾರಾಟ ಮಾಡುತ್ತಿರವ ಮಾಹಿತಿ ಕುರಿತು ಸಾರ್ವಜನಿಕರು ನೀಡಿದ ದೂರಿನ ಆಧಾರದ ಮೇರೆಗೆ ದಾಳಿ ನಡೆಸಿದ ಮುರಗೋಡ ಠಾಣೆ ಪಿಎಸ್‌ಐ ಪ್ರವೀಣ ಗಂಗೋಳ ನೇತೃತ್ವದ ತಂಡ 4350 ರೂ.ಮೌಲ್ಯದ 2.300 ಕೆಜಿ ಗಾಂಜಾ ವಶಪಡಿ ಸಿಕೊಂಡಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಚ್.ಆರ್. ನ್ಯಾಮಗೌಡ್ರ, ಎಸ್.ಎನ್. ದೇಯಣ್ಣವರ, ಎಂ.ಬಿ. ಸಣ್ಣಾಯಿಕ ಇತರರು ಇದ್ದರು.
ಬೈಲಹೊಂಗಲ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ವ್ಯಕಿಯೋರ್ವನನ್ನು ಪಟ್ಟಣದ ಬೈಪಾಸ್ ರಸ್ತೆಯ ಇಂದಿರಾ ನಗರದ ಬಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಸ್ಥಳೀಯ ಜವಳಿ ಕೂಟದ ಶಿವಾನಂದ ಗುರುಲಿಂಗಯ್ಯ ಕಡಪಟ್ಟಿಮಠ (55) ಬಂಧಿತ ವ್ಯಕ್ತಿ. 4 ಸಾವಿರ ರೂ. ಮೌಲ್ಯದ 195 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸಹಾಯಕ ಪೊಲೀಸ್ ಅಧೀಕ್ಷಕ ಪ್ರದೀಪ ಗುಂಟಿ, ಸಿಪಿಐ ಉಳವಪ್ಪ ಸಾತೇನಹಳ್ಳಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಈರಪ್ಪ ರಿತ್ತಿ ಹಾಗೂ
ಸಿಬ್ಬಂದಿ ಎಚ್.ಬಿ. ಮಾಲದಿನ್ನಿ, ಎಂ.ಬಿ. ವಸ್ತ್ರದ, ಎಸ್.ಸಿ. ಕರವೀರನವರ, ಎಸ್.ಯು. ಮಾಡಿ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.