ಮರಿಯಮ್ಮನಹಳ್ಳಿ: ಸ್ಥಳೀಯ ಕೈಗಾರಿಕೆಗಳಿಂದ ಹೋಬಳಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಬೇಕು ಎಂದು ಡಣನಾಯಕನಕೆರೆ ಗ್ರಾಪಂ ಅಧ್ಯಕ್ಷ ಗುಂಡಾ ಸ್ವಾಮಿ ಆಗ್ರಹಿಸಿದರು.
ಪಟ್ಟಣದ ಎಪಿಎಂಸಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತಾನಡಿದರು. ಈಗಾಗಲೇ ಕರೊನಾ ಪ್ರಕರಣಗಳು ಹೆಚ್ಚುತ್ತಿವೆ. ನಿತ್ಯ ಸಾವಿರಾರು ಜನರು ಸಾಯುತ್ತಿದ್ದಾರೆ. ಅಲ್ಲದೇ ಕರೊನಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಸದ್ಯ ಹೋಂ ಐಸೋಲೇಷನ್‌ನಲ್ಲಿರುವ ರೋಗಿಗಳಿಗೆ ಆಕ್ಸಿಜನ್ ಸಮಸ್ಯೆ ಎದುರಾದರೆ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸ್ಪಂದಿಸುತ್ತಿಲ್ಲ. ಮರಿಯಮ್ಮನಹಳ್ಳಿ ಭಾಗದಲ್ಲಿ ಬೃಹತ್ ಕೈಗಾರಿಕೆಗಳಾದ ಸ್ಮಯೋರ್ ಸ್ಟೀಲ್, ಬಿಎಂಎಂ ಇಸ್ಪಾತ್, ಎಸ್‌ಎಲ್ಆರ್ ಮೆಟಾಲಿಕ್ಸ್ , ಸ್ವಾಸ್ತಿಕ್, ಪ್ರಗತಿ ಸ್ಟೀಲ್ಸ್, ಎಂಎಸ್‌ಪಿಎಲ್ ಹಾಗೂ ಅಗರವಾಲ್ ಯೂರಿಯಾ ಕಾರ್ಖಾನೆಗಳಿವೆ. ಇವುಗಳಿಂದ ಅತಿ ಹೆಚ್ಚು ವಾಯು ಮಾಲಿನ್ಯ ಉಂಟಾಗಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿದೆ. ಲಕ್ಷಕ್ಕೂ ಅಧಿಕ ಜನ ಸಂಖ್ಯೆ ಇರುವ ಈ ಭಾಗದಲ್ಲಿ ಕರೊನಾ ಕೇಸ್‌ಗಳು ಹೆಚ್ಚಿವೆ. ಆದ್ದರಿಂದ ಮರಿಯಮ್ಮನಹಳ್ಳಿ ಸರ್ಕಾರಿ ಜಿಟಿಟಿಸಿ ಕಾಲೇಜಿನಲ್ಲಿ ಕಾರ್ಖಾನೆಗಳ ಸಹಕಾರದಿಂದ ಆರೋಗ್ಯ ಇಲಾಖೆ 50 ಬೆಡ್‌ಗಳ ಕೋವಿರ್ ಕೇರ್ ಸೆಂಟರ್ ತೆರೆಯಬೇಕು. ಅಗತ್ಯ ವೈದ್ಯರನ್ನು ನೇಮಿಸುವ ಮೂಲಕ ಜನರ ಜೀವ ಉಳಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ನಾಗರಾಜ, ನಾರಾಯಣ, ಬಡೇ ಇಮಾಮ್ ಸಾಬ್, ಹುಸೇನಿ, ಬಾಷಾ ಇತರರಿದ್ದರು.