ಮರಿಯಮ್ಮನಹಳ್ಳಿ: ಲಲಿತಕಲಾ ರಂಗದ 39 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಲಾನಿಧಿ ಪ್ರಶಸ್ತಿ ಪ್ರದಾನ ಹಾಗೂ ಬೆಳ್ಳಕ್ಕಿ ಹಿಂಡು ಬೆದರ್ಯೋವೋ ನಾಟಕ ಪ್ರದಶನವು ಡಿ.25 ರ ರಾತ್ರಿ 8 ಗಂಟೆಗೆ ಪಟ್ಟಣದ ದುರ್ಗದಾಸ್ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಲಲಿತಕಲಾ ರಂಗದ ಸಂಸ್ಥಾಪಕ ಮ.ಬ.ಸೋಮಣ್ಣ ಹೇಳಿದರು.
ಇಲ್ಲಿನ ದುರ್ಗದಾಸ್ ಕಲಾಮಂದಿರದಲ್ಲಿ ಭಾನುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿರಿಯ ಸಂಶೋಧಕ ಡಾ.ಕೆ.ರವೀಂದ್ರನಾಥ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ.ಬಿ.ಅಂಬಣ್ಣ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಡಿ.ಹನುಮಕ್ಕ ಇತರರು ಭಾಗವಹಿಸಲಿದ್ದಾರೆ.
2023-24 ನೇ ಸಾಲಿನ ಪದ್ಮರಾಜ್ ಜೈನ್, ನೇಮಿರಾಜ್ ಜೈನ್ ಸ್ಮರಣಾರ್ಥ ನಗದು ಪುರಸ್ಕಾರದೊಂದಿಗೆ ಕಲಾನಿಧಿ ಪ್ರಶಸ್ತಿಯನ್ನು ಮರಿಯಮ್ಮನಹಳ್ಳಿಯ ಹಿರಿಯ ರಂಗಕಲಾವಿದೆ ಸಿ.ಗಂಗಮ್ಮ ಅವರಿಗೆ ನೀಡಲಾಗುವುದು. ರಾತ್ರಿ 9 ಗಂಟೆಗೆ ಲಲಿತ ಕಲಾರಂಗದ ಕಲಾವಿದರಿಂದ ಗೊ.ರು.ಚನ್ನಬಸಪ್ಪ ರಚಿಸಿರುವ, ಕೆ.ಶಿವರುದ್ರಯ್ಯ ನಿರ್ದೇಶನ, ಮ.ಬ.ಸೋಮಣ್ಣ ಮಾರ್ಗದರ್ಶನ ಹಾಗೂ ಹ್ಯಾಟಿ ಮಂಜುನಾಥ ಸಹ ನಿರ್ದೇಶನದ ಬೆಳ್ಳಕ್ಕಿ ಹಿಂಡು ಬೆದರ್ಯಾರೋ ನಾಟಕ ಪ್ರದರ್ಶನಗೊಳ್ಳಲಿದೆ.
ಲಲಿತಕಲಾ ರಂಗದ ಅಧ್ಯಕ್ಷ ಎಚ್.ಮಂಜುನಾಥ, ಕಾರ್ಯದರ್ಶಿ ಜಿ.ಎಂ.ಕೊಟ್ರೇಶ್, ಸಹ ಕಾರ್ಯದರ್ಶಿ ಹ್ಯಾಟಿ ಮಂಜುನಾಥ, ಪ್ರಮುಖರಾದ ಕೆ.ನಾಗೇಶ್, ಜಿ.ಸೋಮಣ್ಣ, ಕಟ್ಟೆ ಉಮೇಶ್, ಮಡಿವಾಳರ ಮಂಜುನಾಥ, ಹುರುಕೊಳ್ಳಿ ಗುರುಪ್ರಕಾಶ್, ಕೆ.ರಾಘವೇಂದ್ರ, ಎ.ಅನಿಲ, ಜೆ.ನಂದಿನಿ, ಜಿ.ನಾಗವೇಣಿ ಇತರರಿದ್ದರು.