ಉಳ್ಳಾಲ: ಜಗತ್ತಿನಲ್ಲಿ ಅನೇಕ ದೇಶಗಳು ಆಕ್ರಮಣದಿಂದ ಸರ್ವನಾಶವಾಗಿವೆ. ಆದರೆ ಭಾರತದ ಮೇಲೆ ಆಕ್ರಮಣ ನಡೆದರೂ ನಮ್ಮ ಸಂಸ್ಕೃತಿ, ನಂಬಿಕೆಯಿಂದಾಗಿ ದೇಶದ ಮೂಲ ನೆಲೆಗಟ್ಟು ಭದ್ರವಾಗಿದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
‘ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ’ ಕಾರ್ಯಕ್ರಮ ಪ್ರಯುಕ್ತ ಕುತ್ತಾರ್ ಕೊರಗಜ್ಜನ ಆದಿ ಕ್ಷೇತ್ರದ ಬಳಿ ಭಾನುವಾರ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ನಮ್ಮ ಸಂಸ್ಕೃತಿ ಪ್ರತೀಕವಾಗಿದ್ದ ರಾಮ ಮಂದಿರ ಸುಪ್ರೀಂ ಕೋರ್ಟ್ ತೀರ್ಪಿನಿಂದ ಮತ್ತೆ ನಮ್ಮ ಕೈಗೆ ಬಂದಿದೆ. ದೇಶದ ಜನತೆ ಕೈಜೋಡಿಸಿರುವುದರಿಂದ ಇಂದು ಮಂದಿರ ನಿರ್ಮಾಣ ದೊಡ್ಡ ಸವಾಲಾಗಿಲ್ಲ. ಆದರೆ ಮಂದಿರವನ್ನು ಮಂದಿರವಾಗಿಯೇ ಉಳಿಸುವುದು ನಮ್ಮ ಜವಾಬ್ದಾರಿ. ನಮ್ಮ ಸಂಸ್ಕೃತಿ ಉಳಿದರೆ ಮಂದಿರವೂ ಉಳಿಯುತ್ತದೆ ಎಂದರು.
ಇಂದು ಮನೆಗಳಲ್ಲಿ ದೇವರ ಭಾವಚಿತ್ರ ಇಡಲು ಸಣ್ಣ ಕೋಣೆ ಇದ್ದರೆ, ಟಿವಿ ಇಡಲು ದೊಡ್ಡ ಕೋಣೆ ನಿರ್ಮಿಸಲಾಗುತ್ತಿದೆ. ಭಜನೆಗೆ ತಾಳ ಖರೀದಿಸದ ಮನೆಗಳಲ್ಲಿ ಸಾವಿರಾರು ಮೌಲ್ಯದ ಹೋಂ ಥಿಯೇಟರ್ ಇದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಕೆ.ಕೆ.ಪೇಜಾವರ, ಸಾಮಾಜಿಕ ಜಾಲತಾಣದಲ್ಲಿ ಕೊರಗಜ್ಜ ಮತ್ತು ಮಂತ್ರದೇವತೆಯ ವಿಕೃತಿ ಮಾಡಲಾಗುತ್ತಿದೆ. ಕೊರಗಜ್ಜನನ್ನು ಕೊರಗೇಶ್ವರ ಮಾಡಲಾಗಿದೆ. ಕೋಲ ಹೋಗಿ ಕೋಲೋತ್ಸವ, ನೇಮ ಹೋಗಿ ನೇಮೋತ್ಸವ ಆಗಿದೆ. ಈ ರೀತಿಯ ವಿಕೃತಿಯಿಂದಾಗಿ ನಮ್ಮ ಕೊರಗಜ್ಜ, ನಮ್ಮ ಮೂಲ ಸಂಪ್ರದಾಯದ ಪಾವಿತ್ರೃ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಕೊರಗಜ್ಜನ ಭಕ್ತಿಗೀತೆ ಹಾಡುವ ಮಾಸ್ಟರ್ ಕಾರ್ತಿಕ್ ರಾಜ್ ಅವರನ್ನು ಅಭಿನಂದಿಸಲಾಯಿತು. ವಿಎಚ್‌ಪಿ ಪ್ರಾಂತ ಕಾರ್ಯದರ್ಶಿ ಪ್ರೊ.ಎಂ.ಬಿ.ಪುರಾಣಿಕ್, ವಿಭಾಗ ಸಂಚಾಲಕ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಬಜರಂಗದಳ ಸಂಚಾಲಕ ಪುನೀತ್ ಅತ್ತಾವರ, ಪಂಜಂದಾಯ, ಕೊರಗತನಿಯ ದೈವ ಆದಿಸ್ಥಳದ ಆಡಳಿತ ಮೊಕ್ತೇಸರ ರವೀಂದ್ರನಾಥ ಪೂಂಜ, ಪ್ರವೀಣ್ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು. ಶಿವಾನಂದ ಮೆಂಡನ್ ಸ್ವಾಗತಿಸಿದರು. ಶರಣ್ ಪಂಪ್‌ವೆಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಖಾರಾಜ್ ವಂದಿಸಿದರು. ರವಿ ಅಸೈಗೋಳಿ ಮತ್ತು ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ರಾಮ ನವಮಿಯ ದಿನ ಮಕ್ಕಳಿಗೆ ರಾಮ, ಸೀತೆಯರ ವೇಷ ಹಾಕಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ಮೂಲಕ ಮಕ್ಕಳಲ್ಲಿ ರಾಮನ ಬಗ್ಗೆ ಜಾಗೃತಿ ಮೂಡಿಸಬೇಕು. ರಾಮ ಮಂದಿರ ನಿರ್ಮಾಣ ದೊಡ್ಡ ಕೆಲಸ ಅಲ್ಲದಿದ್ದರೂ, ರಾಮರಾಜ್ಯ ನಿರ್ಮಾಣ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ರಾಮನ ಬಗ್ಗೆ ಜಾಗೃತಿ ಮೂಡಿಸಲು ಹೆತ್ತವರು, ಪಾಲಕರು ಮುಂದಾಗಬೇಕು.
ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠಾಧೀಶ