ಭಕ್ತರು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಪಡೆದರು 
ಜಿಲ್ಲೆ

ಮರವಂತೆ ದೇವಳ ಅಮಾವಾಸ್ಯೆ ಜಾತ್ರೆ ಸಂಪನ್ನ : ವಿವಿಧೆಡೆಯಿಂದ ಭಕ್ತರ ಮಹಾಪೂರ ಸುರಕ್ಷತೆಗೆ ಅಗತ್ಯ ಕ್ರಮ

ಇಂದಿರಾ ಎನ್ ಕೆ

ಗಂಗೊಳ್ಳಿ: ಮರವಂತೆ ನದಿ-ಕಡಲು ನಡುವಿನ, ಹೆದ್ದಾರಿ ಅಂಚಿನ ಮಾರಸ್ವಾಮಿ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಭಾನುವಾರ ಸಂಪನ್ನಗೊಂಡಿತು.

ಮಳೆ ಬಿಡುವು ನೀಡಿದ್ದರಿಂದ ಬೆಳಗಿನಿಂದಲೇ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರ ಮಹಾಪೂರವೇ ಹರಿದುಬಂತು. ಕೆಲವರು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಪಡೆದು ಅಭಿಷೇಕ, ಪೂಜೆ, ಅರ್ಪಣೆ ಸಲ್ಲಿಸಿದರು. ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಆಕರ್ಷಕ ಪುಷ್ಪಾಲಂಕಾರ

ದೇವಾಲಯದೊಳಗೆ ಆಡಳಿತ ಮಂಡಳಿ ಮತ್ತು ಸೇವಾ ವರ್ಗದ ಸದಸ್ಯರು ಸ್ವಯಂಸೇವಕರ ಜತೆ ಸೇರಿ ಶುಚಿತ್ವ, ಪೂಜೆ, ಭಕ್ತರ ಆಗಮನ-ನಿರ್ಗಮನ, ಪ್ರಸಾದ ವಿತರಣೆ ಸುಗಮವಾಗಿ ನಡೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು. ಜಾತ್ರೆ ಅಂಗವಾಗಿ ದೇವಾಲಯಕ್ಕೆ ಆಕರ್ಷಕ ಪುಷ್ಪಾಲಂಕಾರ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ.ನಾಯಕ್ ಹಾಗೂ ಸದಸ್ಯರು, ದೇವಸ್ಥಾನದ ಅರ್ಚಕರು ಉಪಸ್ಥಿತರಿದ್ದರು. ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ ಮಾರ್ಗದರ್ಶನದಂತೆ ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್. ಹಾಗೂ ವಿವಿಧ ಪೊಲೀಸ್ ಠಾಣೆಗಳ ಉಪನಿರೀಕ್ಷರು ಬಂದೋಬಸ್ತ್ ಮಾಡಿದ್ದರು.