ತಿ.ನರಸೀಪುರ: ತಾಲೂಕು ಕೇಂದ್ರದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣಕ್ಕೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳು, ನಾಗರಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಒಳಗೊಂಡಂತೆ ಕ್ರೀಡಾಂಗಣ ಹೋರಾಟ ಸಮಿತಿಯ ವತಿಯಿಂದ ಪಟ್ಟಣದಲ್ಲಿ ಫೆ.16ರ ಭಾನುವಾರ ಮ್ಯಾರಾಥಾನ್ ನಡಿಗೆ ಹಮ್ಮಿಕೊಳ್ಳಲಾಗಿದೆ.
ಹೋರಾಟದ ರೂಪುರೇಷೆ ಅಂತಿಮಗೊಳಿಸಲು ಪಟ್ಟಣದ ಕಬಿನಿ ಅತಿಥಿ ಗೃಹದ ಆವರಣದಲ್ಲಿ ಗುರುವಾರ ಸಂಜೆ ಎರಡನೇ ಹಂತದ ಪೂರ್ವ ಸಿದ್ಧತಾ ಸಭೆ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ 10.30ಕ್ಕೆ ವಿದ್ಯೋದಯ ಕಾಲೇಜು ವೃತ್ತದಿಂದ ಮ್ಯಾರಥಾನ್ ನಡಿಗೆ ಹೋರಾಟ ಆರಂಭಗೊಳ್ಳಲಿದ್ದು, ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಾಲೂಕು ಆಡಳಿತ ಸೌಧದ ಆವರಣವನ್ನು ತಲುಪಲಿದೆ.
ಹೋರಾಟ ಸಮಿತಿಯ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಕ್ರೀಡಾಂಗಣ ನಿರ್ಮಾಣಕ್ಕೆ ಮಂಜೂರಾಗಿರುವ ಸ್ಥಳದಲ್ಲಿ ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿ ಕ್ರೀಡಾಂಗಣ ನಿರ್ಮಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
ಸೇವಾಶ್ರಯ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಆರ್.ಮಣಿಕಂಠ ರಾಜ್ ಗೌಡ, ಹೋರಾಟ ಸಮಿತಿ ಅಧ್ಯಕ್ಷ ಎಂ.ರಮೇಶ್, ನಾಗರಿಕ ಸೇವಾ ವೇದಿಕೆ ಅಧ್ಯಕ್ಷ ಎಚ್.ಆರೀಫ್, ದೈಹಿಕ ಶಿಕ್ಷಣ ಶಿಕ್ಷಕ ಆರ್.ಎಸ್.ಬಸವರಾಜು, ಜಯಪ್ಪ, ಬನ್ನೂರು ಸಿದ್ದೇಶ್, ಪುಟ್ಟರಾಜು, ಉಪನ್ಯಾಸಕ ಕುಮಾರಸ್ವಾಮಿ, ಪುರಸಭಾ ಸದಸ್ಯ ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎನ್.ಲಿಂಗಪ್ಪಾಜಿ, ರಘು, ಬಾಲು, ಚೇತನ್ ರಂಗನಾಥ್, ಕಿರಗಸೂರು ಮಹದೇವಸ್ವಾಮಿ, ಕುರುಬೂರು ಸಿದ್ದೇಶ್, ವೆಂಕಟೇಶ್, ಶಿವು, ನಾಗರಾಜ್ ಮೂರ್ತಿ ಇತರರು ಇದ್ದರು.