ಜಿಲ್ಲೆ

ಗುಡ್ಡಗಾಡು ಓಟ - ರಾಹುಲ್, ಚೈತ್ರಾ ಪ್ರಥಮ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ ವತಿಯಿಂದ ಭಾನುವಾರ ಕುಶಾಲನಗರದಲ್ಲಿ ನಡೆದ ಗುಡ್ಡಗಾಡು ಓಟದ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಮೈಸೂರಿನಿಂದ ಆಗಮಿಸಿದ್ದ ಸ್ಪರ್ಧಿಗಳು ಪಾರಮ್ಯ ಪ್ರದರ್ಶಿಸಿದರು. ಮೈಸೂರು ಮಹಾರಾಜ ಕಾಲೇಜಿನ ರಾಹುಲ್ ನಿಗದಿತ ದೂರವನ್ನು 21.33 ನಿಮಿಷಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಗಳಿಸಿ 10 ಸಾವಿರ ರೂ.ಗಳ ನಗದು ಬಹುಮಾನ ತಮ್ಮದಾಗಿಸಿಕೊಂಡರು. ಇದೇ ಕಾಲೇಜಿನ ಕಜೆ ಸಾಬ್ 21.58 ನಿಮಿಷದಲ್ಲಿ 7.5 ಕಿಮೀ ಓಡಿ ದ್ವಿತೀಯ ಸ್ಥಾನದೊಂದಿಗೆ 8 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡರು.

ಮಂಗಳೂರಿನ ದಿವಾಕರ ಮರಾಠಿ 23.13 ನಿಮಿಷದಲ್ಲಿ ನಿಗದಿತ ದೂರ ಓಡಿ ತೃತೀಯ ಸ್ಥಾನಕ್ಕೆ ತೃಪ್ತಿಪಡೆದುಕೊಂಡರು. ಈ ಮೂಲಕ 6 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡರು. ತೇಜಸ್ ಟಿ.ಡಿ., ನಂದನ್ ಹಾಗೂ ಚನ್ನಬಸವ ನಂತರದ ಸ್ಥಾನಗಳನ್ನು ಪಡೆದುಕೊಂಡು ತಲಾ 4, 3 ಹಾಗೂ 2 ಸಾವಿರ ರೂ. ನಗದು ಬಹುಮಾನಕ್ಕೆ ಪಾತ್ರರಾದರು.

ಬಾಲಕಿಯರ ವಿಭಾಗದಲ್ಲಿ ಕಳೆದ ಬಾರಿಯ ವಿಜೇತೆ ಮೂಡಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ ಟಿ.ಪಿ. ಈ ವರ್ಷವೂ ಪ್ರಥಮ ಸ್ಥಾನ ಗಳಿಸಿದರು. ಇವರು ನಿಗದಿತ ದೂರವನ್ನು 23.20 ನಿಮಿಷದಲ್ಲಿ ಕ್ರಮಿಸಿ 6 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡರು. 4.5 ಕಿ.ಮೀ. ದೂರವನ್ನು 23.54 ನಿಮಿಷದಲ್ಲಿ ಓಡಿದ ಹಾಸನ ಜಿಲ್ಲೆ ಕೊಣನೂರಿನ ರಶ್ಮಿತಾ ಎಸ್.ಎನ್. ದ್ವಿತೀಯ ಸ್ಥಾನ ಪಡೆದುಕೊಂಡು, 5 ಸಾವಿರ ರೂ.ಗಳ ನಗದು ಬಹುಮಾನದ ಗೌರವಕ್ಕೆ ಪಾತ್ರಳಾದಳು. ಕೂಡಿಗೆ ಕ್ರೀಡಾ ಶಾಲೆಯ ಮಿಥಾಲಿ ಮಾಲಕ್ ತೃತೀಯ ಸ್ಥಾನ 24.2 ನಿಮಿಷದಲ್ಲಿ ಗುರಿ ಮುಟ್ಟಿ 4 ಸಾವಿರ ರೂ. ನಗದು ಬಹುಮಾನ ಗಳಿಸಿದಳು. ನಾಲ್ಕನೇ ಬಹುಮಾನ ಪ್ರಗತಿ ಬೋಪಯ್ಯ ಮತ್ತು ನಮಿತಾ ಜಂಟಿಯಾಗಿ ಪಡೆದುಕೊಂಡರು.