ಶನಿವಾರಸಂತೆ ಕಾವೇರಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಹೊಸೂರು ಗ್ರಾಮದಿಂದ ವಿದ್ಯಾಸಂಸ್ಥೆವರೆಗೆ ಹಮ್ಮಿಕೊಂಡಿದ್ದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು. 
ಜಿಲ್ಲೆ

ಶನಿವಾರಸಂತೆ ಕಾವೇರಿ ಕಾಲೇಜಿನಲ್ಲಿ ಮ್ಯಾರಥಾನ್ ಕಲರವ!

ಶನಿವಾರಸಂತೆ: ಪಟ್ಟಣದ ಕಾವೇರಿ ವಿದ್ಯಾಸಂಸ್ಥೆಯ ಕಲೋತ್ಸವದ ಅಂಗವಾಗಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಶನಿವಾರ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಶನಿವಾರಸಂತೆಯಿಂದ 10 ಕಿ.ಮೀ. ದೂರದಲ್ಲಿರುವ ಕೊಡಗು-ಹಾಸನ ಜಿಲ್ಲಾ ಗಡಿಭಾಗದಲ್ಲಿನ ಹೊಸೂರು ಗ್ರಾಮದಿಂದ ಕಾವೇರಿ ವಿದ್ಯಾಸಂಸ್ಥೆಯವರೆಗೆ ಮ್ಯಾರಥಾನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ನಿವೃತ್ತ ಸೈನಿಕ ವಿಕಾಸ್ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿದರು.

ಕಾವೇರಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎಚ್.ಎನ್.ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗುತ್ತದೆ. ಮ್ಯಾರಥಾನ್ ಕ್ರೀಡೆಯ ಒಂದು ಭಾಗವಾಗಿದ್ದು ಈ ನಿಟ್ಟಿನಲ್ಲಿ ನಮ್ಮ ವಿದ್ಯಾಸಂಸ್ಥೆ ವತಿಯಿಂದ ಪ್ರತಿವರ್ಷವೂ ವಿದ್ಯಾರ್ಥಿಗಳಿಗಾಗಿ ಮ್ಯಾರಥಾನ್ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು. ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ್ ಹಾಗೂ ಶಿಕ್ಷಕರು, ಉಪನ್ಯಾಸಕರು ಹಾಜರಿದ್ದರು.

ಸ್ಪರ್ಧಾ ವಿಜೇತರು: ಕಾಲೇಜು ವಿಭಾಗದ ಬಾಲಕರ ವಿಭಾಗದಲ್ಲಿ ಪ್ರಥಮ ಪಿಯುಸಿಯ ಅನಿಶ್ (ಪ್ರಥಮ), ದ್ವಿತೀಯ ಪಿಯುಸಿಯ ಗಗನ್ (ದ್ವಿತೀಯ), ದ್ವಿತೀಯ ಪಿಯುಸಿ ಎಂ.ಕೆ.ಗೌತಮ್ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಪ್ರಥಮ ಪಿಯುಸಿಯ ಚಂದ್ರಕಲಾ (ಪ್ರಥಮ), ದ್ವಿತೀಯ ಪಿಯುಸಿ ಮೋಕ್ಷಾ (ದ್ವಿತೀಯ) ಮತ್ತು ಪ್ರಥಮ ಪಿಯುಸಿ ಸಿರಿ (ತೃತೀಯ) ಸ್ಥಾನ ಪಡೆದುಕೊಂಡರು. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಹತ್ತನೇ ತರಗತಿಯ ಹೇಮಂತ್ (ಪ್ರಥಮ) 9ನೇ ತರಗತಿಯ ದೈವೇಶ್ (ದ್ವಿತೀಯ) ಮತ್ತು 9ನೇ ತರಗತಿಯ ಜಯಂತ್ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ಸಿರಿ (ಪ್ರಥಮ), ಹತ್ತನೇ ತರಗತಿಯ ನೇತ್ರಾವತಿ (ದ್ವಿತೀಯ) ಮತ್ತು ಹತ್ತನೃ ತರಗತಿಯ ವಿನುಶ್ರೀ (ತೃತೀಯ) ಸ್ಥಾನ ಪಡೆದುಕೊಂಡರು.